ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

Lingaraj Badiger
Updated On : 6 Jul 2013, 10:58 am

ಕ.ಪ್ರ.ವಾರ್ತೆ, ತರೀಕೆರೆ, ಜು.5
ಸಹೋದ್ಯೋಗಿಯೊಡನೆ ಜಗಳವಾಡಿದ ವೈದ್ಯರೊಬ್ಬರು ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.
ಆಗಾಗ ಸಹೋದ್ಯೋಗಿಯೊಂದಿಗೆ ನಡೆಯುತ್ತಿದ್ದ ವೈಯಕ್ತಿಕ ಕಲಹದಿಂದ ನೊಂದ ಮೂಳೆ ತಜ್ಞ ಡಾ. ದೇವರಾಜ್ ನಿದ್ರೆ ಮಾತ್ರೆ ಸೇವಿಸಿ, ಆತ್ಮಹತ್ಯೆ ಮಾಡಿಕೊಳ್ಳಲು ವಿಫಲ ಯತ್ನ ನಡೆಸಿದ್ದಾರೆ. ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.
 ಆತ್ಮಹತ್ಯೆಗೆ ಯತ್ನಿಸಿದ ಮುನ್ನ ಡಾ. ದೇವರಾಜ್ ಈ ಬಗ್ಗೆ ಚೀಟಿ ಬರೆದು ಒಬ್ಬ ಹುಡುಗನ ಮೂಲಕ ಪಟ್ಟಣದ ನ್ಯಾಯಾಧೀಶರಿಗೆ ತಲುಪಿಸಿದ್ದಾರೆ.
ವೈದ್ಯರಿಗಾಗಿ ಹುಡುಕಾಟ: ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿ ತಿಳಿದ ಕೂಡಲೇ ಪೊಲೀಸರು ಕಾರ್ಯೋನ್ಮುಖರಾಗಿ ಆಸ್ಪತ್ರೆ, ಕ್ಲಿನಿಕ್ ಮತ್ತಿತರ ಕಡೆ ಹುಡುಕಾಟ ನಡೆಸಿದರು. ಪಟ್ಟಣದ ಎಲ್ಲೆಡೆ ಈ ಸುದ್ದಿ ಹರಡಿ ವೈದ್ಯರ ಸ್ನೇಹಿತರೂ ಪೋನ್, ಮೊಬೈಲ್ ಮೂಲಕ ಡಾ.ದೇವರಾಜ್‌ಗಾಗಿ ಹುಡುಕಾಟ ನಡೆಸಿದರು. ಬಳಿಕ ಈ ವೈದ್ಯರು ಸಾರ್ವಜನಿಕ ಆಸ್ಪತ್ರೆಯ ಒಪಿಡಿಯ ಪಕ್ಕದ ರೂಂನ ಮಂಚದಲ್ಲಿ ಮಲಗಿಕೊಂಡಿರುವುದು ಪತ್ತೆಯಾಯಿತು. ಕೂಡಲೇ ಕೋಣೆಯನ್ನು ಬದಲಿ ಕೀ ಬಳಸಿ ಬಾಗಿಲು ತೆರೆದು ವೈದ್ಯರಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಸೇರಿಸಲಾಗಿದೆ.  
ಜಗಳ ಠಾಣೆಗೆ: ಡಾ.ದೇವರಾಜ್ ಮತ್ತು ಇನ್ನೊಬ್ಬ ವೈದ್ಯರ ನಡುವೆ ಆಗ್ಗಾಗ್ಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗುತ್ತಿತ್ತು. ಆಸ್ಪತ್ರೆಯ ಇತರ ವೈದ್ಯರುಗಳು ಮಧ್ಯ ಪ್ರವೇಶಿಸಿ ಇವರನ್ನು ರಾಜಿ ಮಾಡಿಸುತ್ತಿದ್ದರು. ಆದರೂ ಇವರಿಬ್ಬರ ಜಗಳ ಪೊಲೀಸ್ ಠಾಣೆವರೆಗೂ ತಲುಪಿ ಅಲ್ಲಿಯೂ ಇವರಿಬ್ಬರನ್ನು ಸಮಾಧಾನ ಪಡಿಸಿ ಕಳುಹಿಸಲಾಗಿತ್ತು ಎನ್ನಲಾಗಿದೆ.
ಈಗ ಡಾ. ದೇವರಾಜ್ ವಿರುದ್ಧ ತರೀಕೆರೆ ಠಾಣೆಯಲ್ಲಿ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬಾಲಕಿ ಸಾವು: ಡೆಂಘೀ ಶಂಕೆ
ಚಿಕ್ಕಮಗಳೂರು: ಜ್ವರದಿಂದ ಬಳಲುತ್ತಿದ್ದ ತಾಲೂಕಿನ ಮಾಚೇನಹಳ್ಳಿಯ ಬಾಲಕಿಯೊಬ್ಬಳು ಶುಕ್ರವಾರ ಮೃತಪಟ್ಟಿದ್ದು, ಡೆಂಘೀಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮುಸ್ಕನ್ (9) ಮೃತಪಟ್ಟವಳು.
ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಈ ಬಾಲಕಿಗೆ ಹೆಚ್ಚಿನ ಚಿಕಿತ್ಸೆಗಾಗಿ ಅರಸೀಕೆರೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾಳೆ.
ಮಾಚೇನಹಳ್ಳಿಯಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಕಟ್ಟೆತಿಮ್ಮನಹಳ್ಳಿಯಲ್ಲಿ ಕಳೆದ 5 ದಿನಗಳ ಹಿಂದೆ 10 ವರ್ಷದ ಬಾಲಕಿ ಚೈತ್ರಾಶ್ರೀ ಡೆಂಘೀ ಜ್ವರದಿಂದ ಮೃತಪಟ್ಟಿದ್ದಳು. ವಿಪ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ಮಾಚೇನಹಳ್ಳಿಗೆ ಶುಕ್ರವಾರ ಸಂಜೆ ಭೇಟಿ ನೀಡಿ ಮೃತ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement