ಗದ್ದೆಗೆ ನುಗ್ಗಿದ ಬಸ್ಸು: ನಿರ್ವಾಹಕಿ ಗಂಭೀರ
ಮೂಡಿಗೆರೆ: ಕಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಒಂದು ತಾಲೂಕಿನ ಬಣಕಲ್ ಪೊಲೀಸ್ ಠಾಣೆ ಪಕ್ಕದಲ್ಲಿರುವ ಗದ್ದೆಗೆ ನುಗ್ಗಿದ ಪರಿಣಾಮ ನಿರ್ವಾಹಕರಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರದ ಬೆಳಗ್ಗೆ 6.40ಕ್ಕೆ ಮೂಡಿಗೆರೆ ಬಸ್ ನಿಲ್ದಾಣದಿಂದ ಮಂಗಳೂರಿಗೆ 50 ಜನ ಪ್ರಯಾಣಿಕರನ್ನು ಹೊತ್ತ ಬಸ್ಸು ಬಣಕಲ್ ಮಾರ್ಗವಾಗಿ ಚಲಿಸುತ್ತಿರುವಾಗ, ಆಯ ತಪ್ಪಿ ರಸ್ತೆಯಿಂದ ಗದ್ದೆಗೆ ಇಳಿದರ ಪರಿಣಾಮ ಚಾಲಕ ಹಾಗೂ ಇತರ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಮೂಡಿಗೆರೆ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರ್ವಾಹಕಿ ಶಾರದರಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.