ಚರಂಡಿಗಳಲ್ಲಿ ತ್ಯಾಜ್ಯ: ಸಾರ್ವಜನಿಕರ ಪರದಾಟ
ಕ.ಪ್ರ.ವಾರ್ತೆ, ಕಡೂರು, ಜು.6
ಡೆಂಘೀ, ಚಿಕೂನ್ ಗುನ್ಯಾ ಮತ್ತು ಮಲೇರಿಯಾದಂತಹ ಮಾರಕ ರೋಗಗಳಿಂದ ಸಾವು ಸಂಭವಿಸುತ್ತಿದ್ದರೂ ಕೂಡ ಕಡೂರು ಪಟ್ಟಣದ ಚರಂಡಿಗಳಲ್ಲಿ ನೀರು ತುಂಬಿ ತಾಜ್ಯ ವಸ್ತುಗಳು ಸಂಗ್ರಹವಾಗಿದ್ದರೂ ವಿಲೇವಾರಿಗೆ ಮುಂದಾಗದೆ ಹಂದಿಗಳು ಪಟ್ಟಣದಲ್ಲಿ ವಾಸಿಸುವ ಮೂಲಕ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದ್ದರೂ ಕೂಡ ಕಡೂರು ಪುರಸಭೆಯು ತನ್ನ ಜವಾಬ್ದಾರಿ ಮರೆತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ರೋಗಗಳು ಕೂಡ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಪುರಸಭೆ ಗಮನಹರಿಸುತ್ತಿಲ್ಲ. ಮಳೆ ನೀರು ಚರಂಡಿಗಳಲ್ಲಿ ನಿಲ್ಲುವ ಮೂಲಕ ಕಸ ಸಂಗ್ರಹವಾಗುತ್ತಿರುವುದನ್ನು ನೋಡುತ್ತಿದ್ದರೂ ಕೂಡ ಪುರಸಭೆ ಅಧಿಕಾರಿಗಳು ಆರೋಗ್ಯ ನಿರೀಕ್ಷರು ಗಮನಹರಿಸುತ್ತಿಲ್ಲ ಎಂದು ದೂರಿದ್ದಾರೆ.
ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ರಸ್ತೆಗಳ ಪಕ್ಕದಲ್ಲಿರುವ ಚರಂಡಿಗಳಲ್ಲಿ ಮಳೆನೀರು ಸಂಗ್ರಹದ ಜೊತೆ ಕಸ ಕಟ್ಟಿರುವುದರಿಂದ ಕಸ ತೆಗೆಸದೆ ಚರಂಡಿಗಳಲ್ಲಿರುವ ರಾಶಿ ರಾಶಿ ಕಸವನ್ನು ಪುರಸಭೆ ತೆರವು ಮಾಡಿಸುತ್ತಿಲ್ಲ. ಪಟ್ಟಣದ ವೆಂಕಟೇಶ್ವರ ದೇವಾಲಯದ ಬಳಿ ಚರಂಡಿ ವಿಸ್ತರಿಸದೇ ಇರುವುದರಿಂದ ಕಸ ಸಂಗ್ರಹಣೆ ಹೆಚ್ಚಾಗಿದೆ. ದೇವಾಲಯ ಮತ್ತು ಶಾಲೆಯು ಇರುವುದರಿಂದ ನೀರಿನಿಂದ ತುಂಬಿರುವ ಚರಂಡಿಯಲ್ಲಿನ ಕಸ ರಸ್ತೆ ಮೇಲೆ ಬರುತ್ತಿರುವುದರಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಈ ಬಗ್ಗೆ ಜೆಡಿಎಸ್ ಮುಖಂಡ ಡಿ. ಪ್ರಶಾಂತ್ ಮಾತನಾಡಿ, ಚರಂಡಿಯಲ್ಲಿ ಮಳೆ ನೀರಿನ ಜೊತೆ ಬಾಟಲಿಗಳು, ಪ್ಲಾಸ್ಟಿಕ್ ಗ್ಲಾಸುಗಳು ಅನೇಕ ತ್ಯಾಜ್ಯ ವಸ್ತು ತುಂಬಿ ರಸ್ತೆ ಮೇಲೆ ಹರಿದು ಬರುತ್ತಿವೆ. ಈ ತಾಜ್ಯವನ್ನು ವಿಲೇವಾರಿ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈಗಾಗಲೇ ನಿಂತ ನೀರಿನಿಂದ ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯಾದಂತಹ ಕಾಯಿಲೆಗಳು ಉಲ್ಭಣಿಸಿ ಪಟ್ಟಣ ಪ್ರಾಣಹಾನಿ ಪ್ರಕರಣಗಳು ವರದಿಯಾಗಿದ್ದರೂ ಕೂಡ ಮುಂಜಾಗ್ರತೆಯಾಗಿ ಚರಂಡಿಗಳ ತ್ಯಾಜ್ಯ ವಸ್ತು ವಿಲೇವಾರಿ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಹಂದಿಗಳಿಗೆ ಆಶ್ರಯ ತಾಣ: ಅಲ್ಲದೆ ಹೆಚ್ 1ಎನ್ 1ನಂತಹ ರೋಗ ಹರಡುವ ಸಾದ್ಯತೆಯಿದ್ದರೂ ಪಟ್ಟಣದ ಅಲ್ಲಲ್ಲಿ ಹಂದಿಗಳಿಗೆ ಆಶ್ರಯ ತಾಣಗಳಿದ್ದರೂ ಕೂಡ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದ್ದು, ಪಟ್ಟಣದ ಪ್ರಮುಖ ರಸ್ತೆಗಳ ಕಥೆ ಈ ರೀತಿಯಾದರೆ ಇನ್ನು ಪಟ್ಟಣದ ಒಳಗಿರುವ ಚರಂಡಿಗಳ ಸ್ಥಿತಿ ಗತಿಗಳ ಗತಿ ಶೋಚನೀಯ.
ಎಲ್ಲೆಂದರಲ್ಲಿ ಕಸದರಾಶಿ ಮತ್ತು ಗುಂಡಿಗಳಲ್ಲಿ ನೀರು ಸಂಗ್ರಹ ಕೂಡ ಹೆಚ್ಚಾಗಿರುವುದರ ಬಗ್ಗೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ಗಮನಹರಿಸಿದ್ದಾರೆ ಎಂದು ತಿಳಿಯುತ್ತದೆ.
ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾದ್ಯತೆ ಇರುವುದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಪುರಸಭೆ ಅಧಿಕಾರಿಗಳಿಗೆ ಆದೇಶ ನೀಡಿ ಜನರ ಆರೋಗ್ಯ ಕಾಪಾಡುವತ್ತ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.