ಬಾರ್‌ಗೆ ಅನುಮತಿ: ವಿರೋಧ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.6
ನಗರದ ಮಲ್ಲಂದೂರು ರಸ್ತೆಯಲ್ಲಿ ಈಗಾಗಲೇ ಐದಕ್ಕೂ ಹೆಚ್ಚು ಬಾರ್‌ಗಳಿದ್ದು ಮತ್ತೊಂದು ಬಾರ್ ತೆರೆಯಲು ಹುನ್ನಾರ ನಡೆಸುತ್ತಿದ್ದು ಇದಕ್ಕೆ ಅನುಮತಿ ನೀಡಬಾರದೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ಮಲ್ಲಂದೂರು ರಸ್ತೆಯಲ್ಲಿ ಈಗಾಗಲೇ ನಾಯಿಕೊಡೆಯಂತೆ ತಲೆ ಎತ್ತಿರುವ ಬಾರ್‌ಗಳಿಂದ ಪಾರ್ಕಿಂಗ್ ವ್ಯವಸ್ಥೆ ಹದೆಗೆಟ್ಟಿರುವುದಲ್ಲದೆ ಬಾರ್‌ಗೆ ಬರುವವರು ಬೆಳಿಗ್ಗೆ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡಿದರೆ ಮಧ್ಯರಾತ್ರಿಯಾದರು ತೆಗೆಯುವುದಿಲ್ಲ. ಇದರಿಂದ ಮಲ್ಲಂದೂರು ರಸ್ತೆಯಲ್ಲಿರುವ ಅಂಗಡಿ ಮಾಲಿಕರು ತಮ್ಮ ವಾಹನವನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಸಿದ್ದಾರೆ.
ಕೆಲವೊಮ್ಮೆ ಮದ್ಯಪಾನ ಮಾಡಿದ ಜನರು ಬಾರ್‌ಗಳ ಮುಂದೆ ನಿಂತು ಅವಾಚ್ಯ ಶಬ್ಧಗಳ ಬಳಕೆ ಮಾಡುವುದು ದಾರಿಯಲ್ಲಿ ಓಡಾಡುವ ಜನರಿಗೆ ಕಿವಿ ಚುಚ್ಚುತ್ತಿದೆ. ಲಿಕ್ಕರ್ ಅಂಗಡಿಯ ಆಸುಪಾಸಿನಲ್ಲಿ ಮಹಿಳೆಯ ಪಾಡು ಹೇಳತೀರದಾಗಿದೆ. ಇಷ್ಟೆಲ್ಲಾ ಸಮಸ್ಯೆ ಎದುರಾಗುತ್ತಿರುವ ಬೆನ್ನಲ್ಲೆ ಮತ್ತೊಂದು ಬಾರ್ ತಲೆ ಎತ್ತುತ್ತಿರುವುದು ಸಾರ್ವಜನಿಕರಿಗೆ ನಿದ್ದೆ ಗೆಡಿಸುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಹೆಚ್ಚುವರಿ ಬಾರ್‌ಗಳಿಗೆ ಅನುಮತಿ ನೀಡಬಾರದು ಮತ್ತು ಈಗಿರುವ ಬಾರ್‌ಗಳನ್ನು ಸ್ಥಳಾಂತರಿಸಬೇಕು ಇಲ್ಲವಾದರೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರಾದ ರಮೇಶ್, ಸೋಮೇಗೌಡ, ಶರೀಫ್ ಎಚ್ಚರಿಸಿದ್ದಾರೆ.