ಬೆಂಕಿ: 5 ಜಾನುವಾರು ಸಜೀವ ದಹನ
ತರೀಕೆರೆ: ಶುಕ್ರವಾರ ತಡರಾತ್ರಿ 12-30ರ ಸಮಯದಲ್ಲಿ ಸಮೀಪದ ಗೇರಮರಡಿ ಗ್ರಾಮದಲ್ಲಿ ಬೆಂಕಿ ಆನಾಹುತದಿಂದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 5 ಜಾನುವಾರುಗಳು ಸಜೀವ ದಹನಗೊಂಡ ದುರ್ಘಟನೆ ನಡೆದಿದೆ. ಎರಡು ಸಿಂಧಿ ಹಸು, ಎರಡು ಕರುಗಳು ಮತ್ತು ಒಂದು ಎತ್ತು ಬೆಂಕಿಗಾಹುತಿಯಾಗಿದ್ದು, ಜೊತೆಯಲ್ಲಿ ಕಟ್ಟಿಹಾಕಿದ್ದ ಸುಟ್ಟಿಹೋಗಿದ್ದ ಮತ್ತೊಂದು ಎತ್ತು ಭಾಗಶಃ ಸುಟ್ಟಿದ್ದು ರಕ್ಷಿಸಲಾಗಿದೆ. ಗ್ರಾಮದ ನಿವಾಸಿ ಶಿವಣ್ಣ ಎನ್ನುವವರಿಗೆ ಈ ಜಾನುವಾರುಗಳು ಸೇರಿದ್ದು ಬೇಸಾಯ ಕೆಲಸ ಮುಗಿಸಿಕೊಂಡು ಬಂದು ಎತ್ತು ಕರುಗಳ ಜೊತೆಯೇ ಸಿಂಧಿ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು ಎನ್ನಲಾಗಿದೆ. ರಾತ್ರಿ ಸುಮಾರು 12-30 ರ ಸಮಯದಲ್ಲಿ ಕೊಟ್ಟಿಗೆಯಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದ ಶಬ್ಧದಿಂದ ಮನೆಯವರು, ಅಕ್ಕಪಕ್ಕದವರು ಎದ್ದು ಬೆಂಕಿ ನಂದಿಸಿದರು. ಪಟ್ಟಣದಿಂದ ಅಗ್ನಿಶಾಮಕದಳ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿದರು. ಪಶು ವೈದ್ಯಾದಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು.