ರಸ್ತೆಗುರುಳಿದ ಲಾರಿ: ಸಂಚಾರ ಅಸ್ತವ್ಯಸ್ತ
ಶೃಂಗೇರಿ: ಮಂಗಳೂರು ಶಿವಮೊಗ್ಗ ರಾ.ಹೆ. 13ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಎಸ್.ಕೆ.ಬಾರ್ಡರ್ ಗಣಪತಿಕಟ್ಟೆ ಪಂಡರಾಮಕ್ಕಿ ತಿರುವಿನ ಬಳಿ ಶನಿವಾರ ಭಾರಿ ಸರಕು ಹೊತ್ತ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಗುರುಳಿದ ಘಟನೆ ಸಂಭವಿಸಿದೆ.
ಪರಿಣಾಮ ಬೆಳಗ್ಗೆಯಿಂದಲೇ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಮಂಗಳೂರು- ಶೃಂಗೇರಿ ಸಂಪರ್ಕ ಕಡಿತಗೊಂಡಿತ್ತು. ಸಂಜೆ ಸಂಚಾರ ವ್ಯವಸ್ತೆಯಿರದ ಕಾರಣ ಪ್ರಯಾಣಿಕರು ಪರದಾಡಬೇಕಾಯಿತು. ಈ ಮಾರ್ಗದಲ್ಲಿ ಅಪಾಯಕಾರಿ ತಿರುವುಗಳಿದ್ದು, ಕಿರಿದಾದ ರಸ್ತೆಯಾಗಿರುವುದರಿಂದ ಆಗಾಗ ವಾಹನಗಳು ನಿಯಂತ್ರಣ ತಪ್ಪಿ ಉರುಳುತ್ತಿರುತ್ತವೆ. ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಸಂಜೆಯಿಂದ ವಾಹನ ಸಂಚಾರ ಆರಂಭವಾಯಿತು.