ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಫಿಯ ತವರೂರಲ್ಲಿ ಎಜುಕೇಷನ್ ಫೇರ್

Lingaraj Badiger
Updated On : 8 Jul 2013, 11:15 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.7
ತುಂತುರು ಮಳೆ, ಥಂಡಿ ಗಾಳಿ, ಮನೆಯ ಹೊಸ್ತಿಲು ದಾಟಿ ಹೊರಗೆ ಹೋಗುವುದೇ ಬೇಡ ಎನ್ನುವ ಪ್ರತಿಕೂಲ ಹವಾಮಾನದ ನಡುವೆಯೂ ಇಲ್ಲಿನ ಕಾಫಿಯ ತವರೂರಿನಲ್ಲಿ ಕನ್ನಡಪ್ರಭ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಭಾನುವಾರ ಆಯೋಜಿಸಿದ್ದ ಎಜುಕೇಷನ್ ಫೇರ್ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು, ಪೋಷಕರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.
ನಗರದ ಗಾಯಿತ್ರಿದೇವಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ನಡೆದ ಶಿಕ್ಷಣ ಮೇಳದಲ್ಲಿ ಬಂದ ವಿದ್ಯಾರ್ಥಿಗಳ ಸಂಖ್ಯೆ ನಿರೀಕ್ಷೆಗೂ ಮೀರಿದ್ದು, ಅಂದರೆ ಬೆಳಿಗ್ಗೆ 8.30ರ ವೇಳೆಗೆ ವಿದ್ಯಾರ್ಥಿಗಳು ಶಿಕ್ಷಣ ಮೇಳ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದರು. ಬೆಳಿಗ್ಗೆ 10 ಗಂಟೆಯ ವೇಳೆಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಖ್ಯೆ ಅಪಾರವಾಗಿತ್ತು.
ಶಿಕ್ಷಣದಲ್ಲಿ ವಿಷಯ ಆಯ್ಕೆ: ಮಾಜಿ ಸಚಿವ, ಶಾಸಕ ಸಿ.ಟಿ. ರವಿ ಅವರು ಎಜುಕೇಷನ್ ಫೇರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಕಾಲೇಜಿಗೆ ಸೇರಲು, ಕಾಲೇಜು ಬದಲಾವಣೆ ಮಾಡಲು ಕಾರಣಗಳಿರಲಿಲ್ಲ. ಆದರೆ, ಇಂದು ಕಾಲ ಬದಲಾಗಿದೆ. ವಿಚಾರ ಮಾಡಿ ಶಿಕ್ಷಣದಲ್ಲಿ ವಿಷಯ ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಪೋಷಕರ ಒತ್ತಾಯದ ಮೇಲೆ ಯಾವುದೇ ಕೋರ್ಸ್ ತೆಗೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ಗುರಿ ಮುಖ್ಯ: ಗುರಿಗಿಂತ ಉದಾತ್ತ ಇರಬೇಕು. ಆಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ.
ಶಿಕ್ಷಣ ಪಡೆಯುವಾಗ ಆಲೋಚನೆ ಮತ್ತು ಭವಿಷ್ಯದ ಬಗ್ಗೆ ಯೋಜನೆ ಮಾಡಬೇಕು ಎಂದ ಅವರು, ಮೆರಿಟ್ ಬಂದವರಿಗೆ ಸರ್ಕಾರ ನಿಗದಿಪಡಿಸಿದ ಶುಲ್ಕದಲ್ಲೇ ಪ್ರವೇಶ ನೀಡಬೇಕು. ಇದನ್ನು ಯಾವುದೇ ಕಾಲೇಜು ಉಲ್ಲಂಘನೆ ಮಾಡಬಾರದು ಎಂದು ತಿಳಿಸಿದರು.
ಕೆನರಾ ಬ್ಯಾಂಕಿನ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ವಿಭಾಗೀಯ ವ್ಯವಸ್ಥಾಪಕರಾದ ಕೆ. ಶೇಖರ್, ಎಜುಕೇಷನ್ ಫೇರ್‌ನ ಸಂಘಟಕರಾದ ಯುವರಾಜ್, ಕನ್ನಡಪ್ರಭ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಶಿವಮೊಗ್ಗ ಆವೃತ್ತಿಯ ವ್ಯವಸ್ಥಾಪಕರಾದ ಲಕ್ಷ್ಮೀನಾರಾಯಣಮೂರ್ತಿ ಹಾಗೂ ಕೆನರಾ ಬ್ಯಾಂಕಿನ ಚಿಕ್ಕಮಗಳೂರು ಮುಖ್ಯ ಶಾಖೆಯ ವ್ಯವಸ್ಥಾಪಕ ರಘುನಾಥ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement