ದೇಶದ ದುಸ್ಥಿತಿಗೆ ಕಾಂಗ್ರೆಸ್, ಬಿಜೆಪಿ ಕಾರಣ
ಕ.ಪ್ರ.ವಾರ್ತೆ, ಕಡೂರು, ಜು.7
ದೇಶವು ಎರಡು ರಾಷ್ಟ್ರೀಯ ಪಕ್ಷಗಳ ಅವಾಂತರದಿಂದಾಗಿ
ದುಸ್ಥ್ಥಿತಿಗೆ ತಲುಪಿರುವ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಪಟ್ಟಣದ ಕೆಎಲ್ವಿ ವೃತ್ತದ ಬಳಿಯ ಕುರುಬ ಸಮಾಜ ಆವರಣದಲ್ಲಿ ಶಾಸಕ ವೈಎಸ್ವಿ ದತ್ತ ಅವರ ಪರವಾಗಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಅವರು, ದೇಶದ ಜನರಿಗೆ ಭದ್ರತೆ ಒದಗಿಸಬೇಕಾದ ಕಾಂಗ್ರೆಸ್, ಬಿಜೆಪಿ ಪಕ್ಷಗಳು ತಮ್ಮ ಹೊಣೆಗಾರಿಕೆ ಮರೆತಿವೆ. ಈ ಹಿನ್ನೆಲೆಯಲ್ಲಿ ದೇಶವು ಇಂದು ಈ ದುಸ್ಥಿತಿಗೆ ತಲುಪಿದೆ ಎಂದರು.
ಅಧಿಕಾರಿಗಳೊಂದಿಗೆ ಚರ್ಚೆ: ತಾವು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಡೂರು ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಚಾಲನೆ ನೀಡಲಾಯಿತು. 10 ಕೋಟಿ ಅನುದಾನ ನೀಡಿ ರಾಷ್ಟ್ರದ 14 ರೈಲ್ವೆ ಮಾರ್ಗಗಳಿಗೆ ಚಾಲನೆ ನೀಡಲಾಯಿತು. ತಾಲೂಕಿನ ಬಯಲು ಪ್ರದೇಶದ ಬಡ ಜನರ, ಕಾರ್ಮಿಕರ ಸಂಕಷ್ಟ ಮನಗಂಡು ರೈಲ್ವೆ ಗೂಡ್ಸ್ ಸ್ಥಳಾಂತರವಾಗದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.
ಕಡೂರಿನಲ್ಲಿ ಶಿವಮೊಗ್ಗ ಬೆಂಗಳೂರು ರೈಲು ನಿಲುಗಡೆ ಮತ್ತು ಕಡೂರು ಬೀರೂರು ರೈಲು ನಿಲ್ದಾಣಗಳ ಸಮಸ್ಯೆ ಮತ್ತು ಅಭಿವೃದ್ದಿ ಕುರಿತು ಈಗಾಗಲೇ ಖರ್ಗೆಯವರಿಗೆ ಒತ್ತಾಯಿಸಲಾಗಿದೆ ಎಂದು ಹೇಳಿದರು.
ಮತದಾರರಿಗೆ ಅಭಿನಂದನೆ: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರಾಗಿರುವ ದತ್ತರವರಿಗೆ ಅತಿ ಹೆಚ್ಚು ಮತ ನೀಡಿ ಆಯ್ಕೆ ಮಾಡಿರುವುದಕ್ಕೆ ಮತದಾರರಿಗೆ ಅಭಿನಂದನೆ ತಿಳಿಸಿದ ಅವರು, ದತ್ತ ಅವರು ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಪ್ರಯತ್ನವು ನನಗೆ ಸಂತೋಷ ತಂದಿದೆ ಎಂದು ಕೃತಜ್ಞತೆ ಹೇಳಿದರು.
ಶಾಸಕ ವೈಎಸ್ವಿ ದತ್ತ ಮಾತನಾಡಿ, ಕಡೂರು ಬೀರೂರು ರೈಲ್ವೆ ಅಭಿವೃದ್ಧಿ ಕುರಿತು ದೇವೇಗೌಡರು ಮಾಡಿರುವ ಪ್ರಯತ್ನದ ಬಗ್ಗೆ ಕಾಂಗ್ರೆಸ್ನವರು ಕೇವಲ ಪತ್ರಿಕಾ ಹೇಳಿಕೆ ಕೊಟ್ಟು ಟೀಕಿಸುವ ಮುನ್ನ ಯೋಚಿಸಬೇಕು. ಮಾಧ್ಯಮದವರೂ ಕೂಡ ಇದನ್ನು ವಿಮರ್ಶಿಸಬೇಕು. ಕಾಂಗ್ರೆಸ್ನವರ ಕ್ಷುಲ್ಲಕ ರಾಜಕಾರಣಕ್ಕಾಗಿ ಕೇವಲ ಪತ್ರಿಕೆಗಳಲ್ಲಿ ಪ್ರಚಾರ ಪಡೆಯುವುದಲ್ಲ. ತಮ್ಮದೇ ಸರ್ಕಾರ ಇದ್ದರೂ ಕೂಡ ಏಕೆ ಪ್ರಯತ್ನಿಸಿಲ್ಲ ಎಂದು ಪ್ರಶ್ನಿಸಿದರು.
ಜೆಡಿಎಸ್ನ ಪ್ರಯತ್ನ: ನನ್ನ ಹೋರಾಟದ ಫಲವಾಗಿ ಭದ್ರಾ ನದಿಯಿಂದ ಕಡೂರು ಬೀರೂರು ಪಟ್ಟಣಗಳಿಗೆ ಅಡ್ಡಿಯಾಗಿದ್ದ ಸಮಸ್ಯೆಯನ್ನು ತರೀಕೆರೆ ಮತ್ತು ಲಕ್ಕವಳ್ಳಿ ಜನರ ಮನವೊಲಿಸಿ ಕಾಮಗಾರಿ ಆರಂಭಿಸಿರುವುದು ಜೆಡಿಎಸ್ಗೆ ಕೀರ್ತಿ ತರುತ್ತದೆ. ಅಲ್ಲದೆ ಹೆಬ್ಬೆ ಯೋಜನೆಯನ್ನು ಬಿ ಸ್ಕೀಂಗೆ ಅಳವಡಿಕೆ ಮಾಡಿಸಲಾಗಿದೆ. 1.3 ಟಿಎಂಸಿ ನೀರು ಅಳವಡಿಕೆಯಾಗಿ ಅಂತಿಮ ಹಂತದಲ್ಲಿರುವುದರ ಕ್ರೆಡಿಟ್ ಕೂಡ ಜೆಡಿಎಸ್ಗೆ ಸಲ್ಲುತ್ತದೆ. ಎಲ್ಲ ಸಮಾಜಗಳೂ ಸೇರಿ 68 ಸಾವಿರ ಮತ ನೀಡಿದ್ದರಿಂದ ಅವರಿಗೆ ಕೃತಜ್ಞನಾಗಿದ್ದೇನೆ ಎಂದರು.
ಅನುದಾನ ನೀಡಿ: ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ ಮಾತನಾಡಿ, ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳಿಗಾಗಿ 2.50 ಕೋಟಿ ಅನುದಾನವನ್ನು ದೇವೇಗೌಡರು ತಮ್ಮ ನಿಧಿಯಿಂದ ನೀಡಬೇಕು ಎಂದು ಕೋರಿದರು.
ಸಮಾರಂಭದಲ್ಲಿ ಪಕ್ಷದ ಮುಖಂಡರಾದ ಕೆ.ಎಂ. ಮಹೇಶ್ವರಪ್ಪ, ಭಂಡಾರಿ ಶ್ರೀನಿವಾಸ್, ಕೆ.ಎಸ್. ರಮೇಶ್,ಬಿ.ಟಿ. ಗಂಗಾಧರನಾಯ್ಕ, ಬಿ.ಪಿ. ನಾಗರಾಜು, ಮಂಜುನಾಥ ಪ್ರಸನ್ನ, ಎಚ್. ಉಮೇಶ್, ಡಿ.ಪ್ರಶಾಂತ್, ಜಿಗಣೇಹಳ್ಳಿ ನೀಲಕಂಠಪ್ಪ, ಕೆ.ಎಸ್. ತಿಪ್ಪೇಶ್, ಎನ್. ಇಮಾಮ್, ವಿನಯ ದಂಡಾವತಿ, ಮಹಮದ್ ಇಸ್ಮಾಯಿಲ್, ಕಾಂತರಾಜು, ಬಿಸಲೆರೆ ಕೆಂಪರಾಜು, ಕಂಸಾಗರ ಶೇಖರ್, ಕಾಂತರಾಜು, ರವಿ, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.