ಅಧಿಕಾರಿಗಳ ಗೈರು; ಗ್ರಾಮಸಭೆ ಬಹಿಷ್ಕಾರ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.9
ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದ ಕಾರಣ ಗ್ರಾಮಸ್ಥರೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದಿಯಾಗಿ ಗ್ರಾಮಸಭೆ ಬಹಿಷ್ಕರಿಸಿದ ಘಟನೆ ನಡೆದಿದೆ.
ತಾಲೂಕಿನ ಕರ್ತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆಯು ಸೋಮವಾರ ಸ್ಥಳೀಯ ಸರ್ಕಾರಿ ಶಾಲಾವರಣದಲ್ಲಿ ಕರೆಯಲಾಗಿದ್ದು ಅಧಿಕಾರಿಗಳು ಸಭೆಗೆ ಬಾರದ ಕಾರಣ ಜನರೊಂದಿಗೆ ಜನಪ್ರತಿನಿಧಿಗಳು ಸಭೆ ಬಹಿಷ್ಕರಿಸಿದರು.
ಬಹಿಷ್ಕರಿಸಲು ಕಾರಣವೇನು? 6 ತಿಂಗಳಿಗೊಮ್ಮೆ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಗಳನ್ನು ನಡೆಸಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂಬ ಸರ್ಕಾರದ ಮಾರ್ಗಸೂಚಿ ಇದ್ದರೂ ಮೂವರು ಅಧಿಕಾರಿಗಳು ಹೊರತುಪಡಿಸಿ ಉಳಿದಂತೆ ಬಹುತೇಕರು ಬಾರದಿರುವುದರಿಂದ ಸಭೆ ಬಹಿಷ್ಕರಿಸಲಾಗಿದೆ ಎಂದು ಪಂಚಾಯಿತಿ ಚುನಾಯಿತ ಮಂಡಳಿ ಮತ್ತು ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಗ್ರಾಮಸ್ಥರು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಪುಷ್ಪಕಲಾ ಕನಕರಾಜ್ ಮಾತನಾಡಿ, ಎಂಜಿನಿಯರಿಂಗ್, ಕೃಷಿ, ಆರೋಗ್ಯ ಇಲಾಖೆ ಸೇರಿದಂತೆ 3 ಮಂದಿ ಅಧಿಕಾರಿಗಳು ಹೊರತು ಪಡಿಸಿ ಬೇರೊಬ್ಬ ಅಧಿಕಾರಿಯು ಸಭೆಗೆ ಬಾರದೆ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ. ಈ ಭಾಗದ ಸುತ್ತಮುತ್ತ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ವಿದ್ಯುತ್, ಪಡಿತರ ಚೀಟಿ ಸೇರಿದಂತೆ ಹಲವು ಸಮಸ್ಯೆಗಳು ಉಲ್ಬಣಿಸಿದೆ. ಇವುಗಳ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕಾದರೆ ಸಂಬಂಧಪಟ್ಟ ಅಧಿಕಾರಿಗಳು ಇದ್ದರೆ ಮಾತ್ರ ಸಾಧ್ಯ. ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಸಭೆ ಬಹಿಷ್ಕರಿಸಿದ್ದೇವೆ ಎಂದರು.
ಡಿಸಿ ಕಚೇರಿ ಎದುರು ಪ್ರತಿಭಟನೆ: ಮುಂದಿನ ವಾರದಲ್ಲಿ ಮತ್ತೊಮ್ಮೆ ಸಭೆ ದಿನಾಂಕ ನಿಗದಿಪಡಿಸಿ ಆ ಸಭೆಗೆ ಸಂಪೂರ್ಣ ಅಧಿಕಾರಿಗಳು ಬಂದು ಭಾಗವಹಿಸಿ ಸ್ಥಳೀಯ ಗ್ರಾಮಸ್ಥರ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವುದಾಗಿ ತಿಳಿಸಿದರು.
ಗ್ರಾಮಸ್ಥರಾದ ಚಂದ್ರಪ್ಪ, ಮಂಜುನಾಥ್, ಲಲಿತಮ್ಮ ಮಾತನಾಡಿ, ಈ ಸುತ್ತಾಮುತ್ತಾ ಪ್ರದೇಶದಲ್ಲಿ ಹಗಲು ರಾತ್ರಿ ಎನ್ನದೆ ಕದ್ದು ಮುಚ್ಚಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಜಾನುವಾರುಗಳಿಗೆ ರೋಗಗಳು ಬಂದರೂ ಕೇಳುವವರಿಲ್ಲ, ಅಲ್ಲಲ್ಲಿ ವಿದ್ಯುತ್ ಸಮಸ್ಯೆ ಇದೆ, ರೈತರು ಬೆಳೆದ ಬೆಳೆಗಳ ಬಗ್ಗೆ ಯಾರೂ ಹೇಳೋರು ಕೇಳೊರು ಇಲ್ಲದೆ ಇಷ್ಟೆಲ್ಲಾ ಸಮಸ್ಯೆ ತಾಂಡವವಾಡುತ್ತಿದೆ ಇದನ್ನು ಗ್ರಾಮ ಸಭೆಯಲ್ಲಿ ಕೇಳಿ ಬಗೆಹರಿಸಿಕೊಳ್ಳಬಹುದೆಂದು ಬಂದರೆ ಯಾವುದೆ ಅಧಿಕಾರಿಗಳು ಬಾರದೆ ಉದಾಸೀನತೆ ತೋರಿದ್ದಾರೆ. ನಾವೇ ಅಧಿಕಾರಿಗಳ ಬಳಿ ತೆರಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದರು.
ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕೂಡಲೆ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಗ್ರಾಮಸ್ಥರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಉಪಾಧ್ಯಕ್ಷ ನಾಗರಾಜು, ಲಲಿತಮ್ಮ, ಜಯಣ್ಣ ಸೇರಿದಂತೆ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಸಭೆ ಬಹಿಷ್ಕರಿಸಿದರು.