ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ: ಅನ್ನಪೂರ್ಣ
ಕ.ಪ್ರ.ವಾರ್ತೆ, ತರೀಕೆರೆ, ಜು.10
ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಪಟ್ಟಣದ ಇನ್ನರ್ವ್ಹೀಲ್ ಕ್ಲಬ್ ನೂತನ ಅಧ್ಯಕ್ಷೆ ಅನ್ನಪೂರ್ಣ ಬಸವರಾಜ್ ತಿಳಿಸಿದ್ದಾರೆ.
ರೋಟರಿ ಕ್ಲಬ್ ಮತ್ತು ಇನ್ನರ್ವ್ಹೀಲ್ ಕ್ಲಬ್ ವತಿಯಿಂದ ಎಸ್ಜೆಎಂ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕ್ಲಬ್ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕ್ಲಬ್ನ ನೂತನ ಅಧ್ಯಕ್ಷೆಯಾಗಿ ಪದವಿ ಸ್ವೀಕರಿಸಿ ಮಾತನಾಡಿದರು.
ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಸಮಾಜವನ್ನು ನಡುಗಿಸುತ್ತಿದೆ. ಕಿರುಕುಳ, ಭ್ರೂಣಹತ್ಯೆ ಇತ್ಯಾದಿಗಳು ಮಹಿಳೆಯರ ಮೇಲೆ ನಿತ್ಯ ಶೋಷಣೆಯಾಗುತ್ತಿದೆ. ಸ್ನೇಹ ಮತ್ತು ಸೇವೆಯಿಂದ ಮಹಿಳೆಯರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು, ವಿಕೃತರನ್ನು ಮಹಿಳೆಯರು ಪರಿವರ್ತನೆ ಮಾಡಬೇಕು. ಸುರಕ್ಷತೆ ಕಾರ್ಯವನ್ನು ಇವರೇ ಮಾಡಿಕೊಳ್ಳಬೇಕು, ಮಹಿಳೆಯರಲ್ಲಿ ಆತ್ಮವಿಶ್ವಾಸದ ಕೊರತೆ ಬಹಳ ಇದೆ ಎಂದು ಹೇಳಿದರು.
ಸಹಕಾರ ಪಡೆಯಿರಿ: ಶಿವಮೊಗ್ಗ ಇನ್ನರ್ವ್ಹೀಲ್ ಜಿಲ್ಲಾ ಕಾರ್ಯದರ್ಶಿ ಸುಧಾ ಪ್ರಸಾದ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಕ್ಲಬ್ ಕಳೆದ ವರ್ಷ ಒಳ್ಳೆಯ ಕಾರ್ಯವನ್ನು ನಿರ್ವಹಿಸಿದೆ. ವೇದಿಕೆಯನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕು, ರೋಟರಿ ಸಂಸ್ಥೆಯ ಪೂರ್ಣ ಸಹಕಾರ ಪಡೆದು ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಎಂದು ತಿಳಿಸಿದರು.