ರೋಗ ಹತೋಟಿಗೆ ಸ್ವಚ್ಛತೆ ಅಗತ್ಯ
ನರಸಿಂಹರಾಜಪುರ: ಪಟ್ಟಣದ ಡಿ.ಸಿ.ಎಂ.ಸಿ. ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ ಶಾಲಾ ಅವರಣದಲ್ಲಿ ಇತ್ತೀಚೆಗೆ ನಡೆಯಿತು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ಪ್ರಭಾಕರ್ ಸಾಂಕ್ರಾಮಿಕ ರೋಗದ ಹತೋಟಿ ಬಗ್ಗೆ ಮಾತನಾಡಿ, ಗಾಳಿ, ನೀರು, ಕಲುಷಿತ ಆಹಾರದಿಂದ ಬರುವ ಸಾಂಕ್ರಾಮಿಕ ರೋಗ ಅಲ್ಲದೆ ಪ್ರಸ್ತುತ ಆರೋಗ್ಯ ಸಮಸ್ಯೆಯಾದ ಕೀಟಗಳಿಂದ ಬರುವ ಸಾಂಕ್ರಾಮಿಕ ರೋಗವಾದ ಡೆಂಘೀ, ಮಲೇರಿಯಾ, ಫೈಲೇರಿಯಾ (ಆನೆ ಕಾಲು ರೋಗ) ಮೆದಳು ಜ್ವರ ಸಮಸ್ಯೆಯಾಗಿ ಕಾಡುತ್ತವೆ ಎಂದರು.
ಹತೋಟಿ ಅಗತ್ಯ: ಈ ರೋಗಳ ಹತೋಟಿಗೆ ಕೀಟ ಜನ್ಯಗಳನ್ನು ಹತೋಟಿಗೆ ತರುವುದೇ ಮುಖ್ಯವಾಗಿದೆ. ಕೀಟ ಜನ್ಯಗಳ ನಿಯಂತ್ರಣ ಅತಿ ಮುಖ್ಯವಾಗಿದೆ. ಮನೆಯ ಸುತ್ತ ಮಳೆಗಾಲದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಕಾಯಿ ಚಿಪ್ಪು, ಟೈರುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ಡ್ರಂಗಳನ್ನು ಮುಚ್ಚಿಡಬೇಕು ಹಾಗೂ ಒಂದು ವಾರಕ್ಕೊಮ್ಮೆ ನೀರನ್ನು ಕಾಲಿ ಮಾಡಿ ನಂತರ ಶೇಖರಿಸಬೇಕು ಎಂದರು.
ಸೊಳ್ಳೆಗಳಿಂದ ಹರಡುವ ಈ ಸಾಂಕ್ರಾಮಿಕ ರೋಗದ ಹತೋಟಿಗೆ ಆರೋಗ್ಯ ಇಲಾಖೆಯ ಜೊತೆಗೆ ಸಾರ್ವಜನಿಕರೂ ಕೈ ಜೋಡಿಸಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಸರ್ಕಾರಿ ಆಸ್ಪತ್ರೆಯ ದಂತ ವೈದ್ಯರಾದ ಡಾ. ಸುನೀತಾ ಮಾತನಾಡಿ, ಸಾಮಾನ್ಯವಾಗಿ ಮಕ್ಕಳಿಗೆ ಬರುವ ಕಾಯಿಲೆಯಲ್ಲಿ ಹಲ್ಲಿನ ರೋಗವೇ ಹೆಚ್ಚು ಕಾಣಿಸುತ್ತದೆ. ಮಕ್ಕಳು ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.ದಂತ ಕುಳಿ ಬರದ ಹಾಗೇ ನೋಡಿಕೊಳ್ಳಬೇಕು.
ಹಲ್ಲಿನ ಆರೋಗ್ಯ ಕಾಪಾಡಿಕೊಂಡರೆ ಶಾಶ್ವತ ಹಲ್ಲುಗಳು ಉಳಿಯುತ್ತದೆ ಎಂದು ಅವರು ಹಲ್ಲಿನ ಆರೋಗ್ಯದ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ವಿವರಿಸಿದರು.
ಕ್ಷೇತ್ರ ಮಾಹಿತಿ: ತಾಲೂಕು ಒಕ್ಕಗಲಿಗರ ಸಂಘದ ಕಾರ್ಯದರ್ಶಿ ಎಚ್.ಟಿ. ರಾಜೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಡಿ.ಸಿ.ಎಂ.ಸಿ ಶಾಲೆಯ ಮಕ್ಕಳಿಗಾಗಿ ಪ್ರತಿ ತಿಂಗಳು ಮಾನವ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಕ್ಷೇತ್ರದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ವರ್ಗೀಸ್, ಶಾಲೆಯ ಆಡಳಿತ ಮಂಡಳಿಯ ಖಜಾಂಚಿ ಜಿ.ಪಿ. ವೆಂಕಟೇಶ್, ಪ್ರಾಂಶುಪಾಲರಾದ ಪದ್ಮಾ ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.