ಲಾಭದ ಕಸುಬಿನತ್ತ ಮುಖ ಮಾಡಿ
ಮೂಡಿಗೆರೆ: ಇತ್ತೀಚೆಗೆ ಕೃಷಿ ಲಾಭದಾಯಕವಾಗಿಲ್ಲ. ರೈತರು ಅನಿವಾರ್ಯವಾಗಿ ಕೃಷಿಕರಾಗಿದ್ದಾರೆ ಎಂದು ಮಂಗಳೂರು ಮೀನುಗಾರಿಕೆ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಗದ ಅಭಿಪ್ರಾಯ ಪಟ್ಟರು.
ಸಮೀಪದ ಹ್ಯಾಂಡ್ ಪೋಸ್ಟ್ ವಲಯ ಕೃಷಿ ಕೇಂದ್ರದ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯ ಶಿವಮೊಗ್ಗ, ಒಳನಾಡು ಮೀನುಗಾರಿಕೆ ಘಟಕ ಮತ್ತು ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಮೂಡಿಗೆರೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮೀನು ಕೃಷಿಕರ ದಿನಾಚರಣೆ -2013 ಉದ್ಘಾಟಿಸಿ ಮಾತನಾಡಿದ ಅವರು, ರೈತರು ಅನಗತ್ಯವಾಗಿ ಒಂದೇ ಕಸುಬಿಗೆ ಅಂಟಿಕೊಳ್ಳದೆ ಲಾಭದಾಯಕವಾಗಿರುವ ಇತರೆ ಕಸುಬುಗಳತ್ತ ಮುಖ ಮಾಡ ಬೇಕಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮೀನು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳು ಲಾಭದಾಯಕವಾಗಿದೆ. ಮೀನು ಕೃಷಿಗೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ಭಾರತ ಸರ್ಕಾರ ಹೈದರಬಾದ್ನಲ್ಲಿ 2006 ರಲ್ಲಿ ರಾಷ್ಟ್ರೀಯ ಮೀನುಗಾರಿಕೆ ಅಭೀವೃದ್ಧಿ ಮಂಡಲಿ ಸ್ಥಾಪಿಸಿತ್ತು. ಜಲಾಶಯ ಅಭಿವೃದ್ಧಿ, ಮೀನು ಮರಿ ಉತ್ಪಾದನೆ, ಆಳ ಸಮುದ್ರದ ಮೀನುಗಾರಿಕೆ, ಬಂದರು ಅಭಿವೃದ್ಧಿ, ಸಾಂಧ್ರೀಕೃತ ಮೀನು ಕೃಷಿ, ಅಲಂಕಾರಿಕಾ ಮೀನು ಉತ್ಪಾದನೆ, ಸಂಸ್ಕರಣಾ ಘಟಕಗಳ ಅಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿಯ ಆಶಯದೊಂದಿಗೆ ಉತ್ತಮ ಕೆಲಸ ನಿರ್ವಹಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಎಸ್.ಡಿ. ರಂಗಸ್ವಾಮಿ ಮಾತನಾಡಿ, ಮೀನಿನಿಂದ ಎ, ಬಿ ಮತ್ತು ಡಿ ವಿಟಮಿನ್ಗಳಿದ್ದು ಮೀನು ಸೇವನೆ ಆರೋಗ್ಯಕ್ಕೆ ಉತ್ತಮ. ಹೊರ ದೇಶಗಳಲ್ಲಿ ಮೀನಿನೆಣ್ಣೆಗೆ ಬಹಳ ಬೇಡಿಕೆ ಇದೆ. ಸಾವಯವ ಕೃಷಿಗೆ ತೆಂಗು, ಅಡಕೆಗೆ ಮೀನಿನ ಗೊಬ್ಬರ ಉತ್ತಮ ವಾಗಿದೆ ಎಂದರು.
ಮೂಡಿಗೆರೆ ಕೃಷಿ ಕೇಂದ್ರದ ವಲಯ ಸಹ ವಿಸ್ತೀರಣಾ ನಿರ್ದೇಶಕ ಡಾ.ಡಿ. ಮಾದಯ್ಯ ಮಾತನಾಡಿ, ಬತ್ತ, ಕಾಫಿ ಬೆಳೆಯುವ ಜಾಗದಲ್ಲಿ ಮೀನು ಕೃಷಿ ಮಾಡುವುದರಿಂದ ಕೊಳೆ ರೋಗ ತಡೆಗಟ್ಟಲು ಸಾಧ್ಯ ಮತ್ತು ಬತ್ತ ಹೆಚ್ಚು ಇಳುವರಿ ಬರುತ್ತದೆ. ಮೀನು ಕೃಷಿ ಪರಿಸರ ಸ್ನೇಹಿ ಕೃಷಿ ಎಂದು ತಿಳಿಸಿದರು. ರಾಜಣ್ಣ, ಕುಪ್ಪಣ್ಣ, ಸ್ವಾಮಿ, ಶ್ರೀನಾಥ್, ವನಜಾಕ್ಷಿ, ಗಣೇಶ್ ಇದ್ದರು. ತಾಲೂಕಿನ ನಾನಾ ಭಾಗಗಳಿಂದ ರೈತರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬಣ್ಣದ ಮೀನುಗಳ ಸಾಕಾಣಿಕೆ ಮತ್ತು ಅದರ ಉಪಯುಕ್ತದ ಬಗ್ಗೆ ರೈತರಿಗೆ ಮಾಹಿತಿಯನ್ನು ವಿಜ್ಞಾನಿಗಳು ನೀಡಿದರು. 30 ಜನ ಮೀನು ಕೃಷಿಕರಿಗೆ ಮೀನು ಕೃಷಿಯ ಸಲಕರಣೆಗಳನ್ನು ವಿತರಿಸಿದರು.