ಪದಾಧಿಕಾರಿಗಳ ಆಯ್ಕೆ
ನರಸಿಂಹರಾಜಪುರ: ಮೆಣಸೂರಿನ ಆದರ್ಶ ಯುವಕ ಸಂಘದ ಮಾಸಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಕೆ. ಅನಿಲ್ ಆಯ್ಕೆಯಾಗಿದ್ದಾರೆ.
15 ರಂದು ನಡೆಯುವ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಪದಾಧಿಕಾರಿಗಳು: ಗೌರವಾಧ್ಯಕ್ಷ ವರ್ಗೀಸ್ ಸಿ.ಜೆ, ಅಧ್ಯಕ್ಷ ಅನಿಲ್.ಕೆ, ಉಪಾಧ್ಯಕ್ಷ ರಂಜನ್ ಎಂ.ಜೆ, ಕಾರ್ಯದರ್ಶಿ ಎಲ್ದೋ .ಟಿ, ಉಪಕಾರ್ಯದರ್ಶಿ ವಿ.ಜೆ. ಬಿನು, ಕ್ರೀಡಾ ಕೂಟ ಮ್ಯಾನೇಜರ್ ಎಸ್. ಸಾಜು, ಸಂಚಾಲಕ ರೋಬಿನ್ಸನ್.
ನಾಮಪತ್ರ ಸಲ್ಲಿಕೆ
ಶೃಂಗೇರಿ: ರಾಜ್ಯ ನೌಕರರ ಸಂಘ, ಶೃಂಗೇರಿ ಘಟಕದ ಕಾರ್ಯಕಾರಿ ಸಮಿತಿಗೆ 22 ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕಿಯೆ ಆರಂಭವಾಗಿದೆ. ಜುಲೈ 11 ರಿಂದ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ನಾಮಪತ್ರ ವಿತರಿಸಲಾಗುತ್ತಿದ್ದು, ಜುಲೈ 15 ರವೆರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಸಲು ಜುಲೈ 15 ಕೊನೆಯ ದಿನವಾಗಿದೆ. ಅಂದೇ ಸಂಜೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಾಸ್ ಪಡೆಯಲು ಜುಲೈ 16 ಕೊನೆಯ ದಿನವಾಗಿದೆ. 22 ರಂದು ಚುನಾವಣೆ ನಡೆಯಲಿದೆ. ಅದೇ ದಿನ ಸಂಜೆ ಪಲಿತಾಂಶ ಪ್ರಕಟವಾಗಲಿದೆ. ವಿವರಗಳಿಗೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಚುನಾವಣಾಧಿಕಾರಿ ಟಿ.ಎಲ್. ಉಮೇಶ್ ತಿಳಿಸಿದ್ದಾರೆ.
ನಾಮ ಪತ್ರ
ನರಸಿಂಹರಾಜಪುರ: ಜುಲೈ 22 ರಂದು ನಡೆಯುವ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆಗೆ ನಾಮ ಪತ್ರ ಸಲ್ಲಿಕೆ ಕಾರ್ಯ ಗುರುವಾರ ಪ್ರಾರಂಭಗೊಂಡಿದ್ದು ಪ್ರಥಮ ದಿನವಾದ ಗುರುವಾರ ಆರೋಗ್ಯ ಇಲಾಖೆಯಿಂದ 4 ನಾಮ ಪತ್ರ ಸಲ್ಲಿಕೆಯಾಗಿದೆ ಎಂದು ಚುನಾವಣಾಧಿಕಾರಿ ಬಿ.ಜಿ. ಮಾಳಮ್ಮ ತಿಳಿಸಿದ್ದಾರೆ.
ನಿಗಮ, ಮಂಡಳಿಗೆ ಮನವಿ
ಮೂಡಿಗೆರೆ: ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಮುಹಮ್ಮದ್ ಅವರಿಗೆ ಕ್ಯಾಬಿನೆಟ್ ದರ್ಜೆಯ ನಿಗಮ ಅಥವಾ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯಿಸಿ ಮುಸ್ಲಿಂ ಹಿತರಕ್ಷಣಾ ವೇದಿಕೆ ಮತ್ತು ಸಂಯುಕ್ತ ಜಮಾಅತ್ ಗಳ ಒಕ್ಕೂಟದ ಪದಾಧಿಕಾರಿಗಳು ಪ್ರತ್ಯೇಕವಾಗಿ ಜಿಲ್ಲಾ ಉಸ್ತುವಾರಿ ಮಂತ್ರಿ ಅಭಯಚಂದ್ರ ಜೈನ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಿ.ಕೆ. ಇಬ್ರಾಹಿಂ, ಅಕ್ರಂ ಹಾಜಿ, ಎ.ಸಿ. ಅಯ್ಯೂಬ್ ಹಾಜಿ, ಕಿರುಗುಂದ ಅಬ್ಬಾಸ್, ಹೆಸಗಲ್ ಗ್ರಾಪಂ ಸದಸ್ಯ ಮೊಹಿದ್ದೀನ್ ಸೇಠ್, ಹಂಝ ಮೊದಲಾದವರು ಇದ್ದರು.
ಕುಸಿದ ಕಟ್ಟಡ: ತಪ್ಪಿದ ಭಾರಿ ದುರಂತ
ಚಿಕ್ಕಮಗಳೂರು: ಎಂಟು ಮನೆಗಳಿದ್ದ ಒಂದು ಅಂತಸ್ತಿನ ಕಟ್ಟಡ ಗುರುವಾರ ಮಧ್ಯಾಹ್ನ ನಗರದಲ್ಲಿ ಸಂಪೂರ್ಣವಾಗಿ ಕುಸಿಯಿತು.
ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಅನಾಹುತ ರಾತ್ರಿ ಸಂಭವಿಸಿದ್ದರೆ ಹಲವರು ಬಲಿಯಾಗುತ್ತಿದ್ದರು.
ನಗರದ ಮಾರ್ಕೆಟ್ ರಸ್ತೆಯಲ್ಲಿ ಗಿಡ್ಡೇಗೌಡ ಎಂಬುವವರಿಗೆ ಸೇರಿದ ಹಳೆಯದಾದ ಮನೆ ಇದ್ದು, ಇಲ್ಲಿನ ಕೆಳ ಅಂತಸ್ತಿನಲ್ಲಿ ನಾಲ್ಕು ಹಾಗೂ ಮೇಲಿನ ಅಂತಸ್ತಿನಲ್ಲಿ ನಾಲ್ಕು ಮನೆಗಳಿದ್ದವು. ಇಲ್ಲಿ ವಾಸವಾಗಿದ್ದವರು ಬಹುತೇಕ ಕೂಲಿ ಕಾರ್ಮಿಕರು. ಅವರು ಗುರುವಾರ ಎಂದಿನಂತೆ ಬೆಳಿಗ್ಗೆ ಕೆಲಸಗಳಿಗೆ ತೆರಳಿದ್ದು, ಮನೆಗಳಲ್ಲಿ ಯಾರೂ ಇರಲಿಲ್ಲ. ಈ ಕಟ್ಟಡದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಇದ್ದಕ್ಕಿದ್ದಂತೆ ಇಡೀ ಕಟ್ಟಡ ಕುಸಿದು ಬಿದ್ದಿದೆ. ಇಲ್ಲಿನ ಎಲ್ಲಾ ಮನೆಗಳು ನೆಲಸಮವಾಗಿವೆ. ಈ ಕಟ್ಟಡ ಪಕ್ಕದ ಮನೆಯ ಮೇಲೂ ಬಿದ್ದರಿಂದ ಆ ಮನೆಗೂ ನಷ್ಟ ಸಂಭವಿಸಿದೆ.
ದಿಢೀರ್ ಕಟ್ಟಡ ಕುಸಿದಿದ್ದರಿಂದ ಆಸುಪಾಸಿನ ಜನರು ಭಯಭೀತರಾಗಿ ಹೊರಗೆ ಬಂದರು. ಶೀಥಿಲಗೊಂಡಿದ್ದ ಕಟ್ಟಡದ ಮೇಲೆ ಮತ್ತೊಂದು ಅಂತಸ್ತು ನಿರ್ಮಾಣ ಮಾಡಿದ್ದರ ಪರಿಣಾಮ ಈ ಕಟ್ಟಡ ಕುಸಿದಿದೆ ಎಂದು ಹೇಳಲಾಗುತ್ತಿದೆ.