ಪ್ರಕೃತಿ ವಿಕೋಪ ಎದುರಿಸಲು ಸಿದ್ಧರಾಗಿ
ತರೀಕೆರೆ: ನೆರೆ ಹಾವಳಿ ಸೇರಿದಂತೆ ಯಾವುದೆ ಪ್ರಕೃತಿ ವಿಕೋಪ ಎದುರಿಸಲು ಅಧಿಕಾರಿಗಳು ಸನ್ನದ್ದರಾಗಿರಬೇಕೆಂದು ಉಪವಿಭಾಗಾಧಿಕಾರಿ ಅನುರಾಧ ತಿಳಿಸಿದ್ದಾರೆ.
ತಾಲೂಕು ವಿಪತ್ತು ಪ್ರಾಧಿಕಾರ ಸಮಿತಿ, ತಾಲೂಕು ಆಡಳಿತದಿಂದ ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಿ ಪ್ರಕೃತಿ ವಿಕೋಪವನ್ನು ಎದುರಿಸುವಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸಬೇಕು, ಮಳೆಯಿಂದ ನೆರೆ ಹಾವಳಿ, ಭೂಕುಸಿತ, ಮರ ಬೀಳುವುದು ಇತ್ಯಾದಿ ವಿಪತ್ತು ಸಂಭವಿಸಿದರೆ ಅಂತಹ ಸಂದರ್ಭದಲ್ಲಿ ಜನರ ರಕ್ಷಣೆ ಕಾರ್ಯದಲ್ಲಿ ಅಧಿಕಾರಿಗಳು ಭಾಗವಹಿಸಬೇಕು. ಈ ಬಗ್ಗೆ ತಾಲೂಕು ಕಚೇರಿಯಲ್ಲೇ ಒಂದು ಕಂಟ್ರೋಲ್ ರೂಂ ಪ್ರಾರಂಭಿಸಲಾಗಿದ್ದು, 222250 ಈ ದೂರವಾಣಿ ಸಂಖ್ಯೆಗ ಕರೆ ಮಾಡಬೇಕೆಂದು ಅವರು ಮನವಿ ಮಾಡಿದರು.
ಭದ್ರಾ ಜಲಾಶಯ ತುಂಬಿದರೆ ನೀರು ಬಿಡುವ ಸಂದರ್ಬದಲ್ಲಿ ಸೋಂಪುರ ದೇವಸ್ಥಾನ ಸುತ್ತ ದ್ವೀಪವಾಗುವುದು. ಹೀಗಾಗಿ ಅಲ್ಲಿರುವ 9 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲು ಏರ್ಪಾಡು ಮಾಡಲಾಗುವುದು ಮತ್ತು ಗೆಂಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಅವರು ತಿಳಿಸಿದರು.
ರಾ.ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಎರಡೂ ಬದಿಯಲ್ಲಿ ಗಿಡ ಗಂಟೆಗಳು ಹೆಚ್ಚಾಗಿ ಬೆಳೆದಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತದೆ, ಪಿ.ಡಬ್ಲೂ.ಡಿ ಇಲಾಖೆ ಅಧಿಕಾರಿಗಳು ಕೂಡಲೇ ಜಂಗಲ್ ಕ್ಲಿಯರೆನ್ಸ್ ಮಾಡಬೇಕು ಎಂದು ಸೂಚಿಸಿದರು.
ಬರ ಪರಿಹಾರ ನಿಧಿ: ತಹಸೀಲ್ದಾರ್ ರಂಜಿತ ಅವರು ಮಾತನಾಡಿ, ಕಳೆದ ಸಾಲಿನ ತಾಲೂಕಿನಲ್ಲಿ ಸಂಭವಿಸಿದ ಬೆಳೆ ನಷ್ಟ ಇತ್ಯಾದಿಗಳಿಗಾಗಿ ಬರ ಪರಿಹಾರ ನಿಧಿಯಲ್ಲಿ ಸರ್ಕಾರ 1.29 ಕೋಟಿ ರು.ಗಳನ್ನು ಮಂಜೂರು ಮಾಡಿದೆ. ಬೆಳೆ ನಷ್ಟ ಪರಿಹಾರವನ್ನು ತೋಟಗಾರಿಕೆ ಮತ್ತು ಕೃಷಿ ಇಲಾಖೆ ಮೂಲಕ ವಿತರಿಸಲಾಗುವುದು, ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಒಳ್ಳೆಯ
ಮಳೆಯಾಗುವ ಸೂಚನೆ ಇದ್ದು, ಬೀಜ ಗೊಬ್ಬರ ಇತ್ಯಾದಿಗಳ ಸಂಗ್ರಹಣೆ ಇದೆ ಮತ್ತು ಅಜ್ಜಂಪುರದ ಅಮೃತಮಹಲ್‌ನಲ್ಲಿ ಮೇವು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ವಿವಿಧ ಇಲಾಖೆ ಅದಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ವಿಪತ್ತುಗಳು ಸಂಭವಿಸಿದರೆ ಕೂಡಲೇ ಸಂಪರ್ಕಿಸಬೇಕಾದ ಮೊಬೈಲ್ ನಂ. ಈ ಕೆಳಗಿನಂತಿವೆ.