ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ಸಿಪಿಐ ಧರಣಿ

Lingaraj Badiger
Updated On : 12 Jul 2013, 10:49 am

ಚಿಕ್ಕಮಗಳೂರು: ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ತಾಲೂಕಿನ ತಳಿಹಳ್ಳ ಗ್ರಾಮ ಪಂಚಾಯ್ತಿ ಎದುರು ಸಿಪಿಐ (ಎಂ.ಎಲ್.) ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ತಳಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾರ್ಯದರ್ಶಿ ಸಿ.ಎಚ್. ಪರಮೇಶ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನೀರು, ರಸ್ತೆ, ವಸತಿ, ವಿದ್ಯುತ್ ಸಮಸ್ಯೆಗಳ ನಿವಾರಣೆಗಾಗಿ ಹಲವು ಬಾರಿ ಪ್ರತಿಭಟನೆ ನಡೆಸಿದರು ಪಂಚಾಯ್ತಿಯವರು ಸ್ಪಂದಿಸಿಲ್ಲ. ಈ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಚನ್ನಗೊಂಡನಹಳ್ಳಿ, ಉಳುವಾಗಿಲು, ಜಕ್ಕನಹಳ್ಳಿ, ಇಳೆಹೊಳೆ, ಕಟ್ರುಮನೆ, ಮಾರಿಗುಡಿ ಗ್ರಾಮಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಚನ್ನಗೊಂಡನಹಳ್ಳಿಯಲ್ಲಿ ಸುಮಾರು 200 ಕುಟುಂಬಗಳಿದ್ದು, 1500ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಇಲ್ಲಿರುವ ಸ್ಕೂಲ್ ಕಾಲೋನಿ, ಕೆಂಡದಗುಂಡಿ ಕಾಲೋನಿ, ಭೂತನ ಕಾಲೋನಿ, ಸಂಪಿಗೆ ಕಾಲೋನಿ, ಗಣೇನಹಳ್ಳಿ ಕಾಲೋನಿಯಲ್ಲಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿವೆ. ಒಳ ಚರಂಡಿ ವ್ಯವಸ್ತೆ ಇಲ್ಲದಿರುವುದರಿಂದ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಬೀದಿ ದೀಪಗಳಿದ್ದರು ಅವುಗಳು ಉರಿಯುತ್ತಿಲ್ಲ ಎಂದು ಹೇಳಿದ್ದಾರೆ.
ಒಳಚರಂಡಿ ನಿರ್ಮಿಸಿ: ಚನ್ನಗೊಂಡನಹಳ್ಳಿ ಗ್ರಾಮದ ನೀರು, ರಸ್ತೆ, ಒಳಚರಂಡಿ, ನಿವೇಶನ, ವಸತಿ ಸಮಸ್ಯೆಗಳನ್ನು ಬಗೆಹರಿಸಬೇಕು. ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕು. ಮನೆ ಇಲ್ಲದವರಿಗೆ ಮನೆ ಮಂಜೂರು ಮಾಡಬೇಕು. ನೀರಿನ ಸಮಸ್ಯೆ ಎದುರಿಸುತ್ತಿರುವ ಮನೆಗಳಿಗೆ ನೀರು ಒದಗಿಸಬೇಕು. ಒತ್ತುವರಿಯಾಗಿರುವ ರಸ್ತೆಯ ಜಾಗವನ್ನು ಖುಲ್ಲಾಗೊಳಿಸಬೇಕು. ಸಮುದಾಯ ಭವನ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಒತ್ತುವರಿಯಾಗಿರುವ ಗೋಮಾಳ, ಕೆರೆಕಟ್ಟೆಗಳನ್ನು ತೆರವುಗೊಳಿಸಬೇಕು, ಕೆಟ್ಟಿರುವ ಬೀದಿ ದೀಪಗಳನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ. ಸಿಪಿಐ (ಎಂ.ಎಲ್.) ಮುಖಂಡರಾದ ಬಸವರಾಜ್, ಕೆ.ಎಚ್. ಮಹೇಶ್, ಹೂವಮ್ಮ, ಸತೀಶ್, ಪ್ರೇಮ, ಭವ್ಯ, ಜಗದೀಶ್, ಪುಟ್ಟಸ್ವಾಮಿ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement