ಕ್ಯಾರಿ ಓವರ್ ಹಳೆ ಪದ್ಧತಿ ಮುಂದುವರೆಸಿ
ಚಿಕ್ಕಮಗಳೂರು: ಡಿಪ್ಲೋಮಾ ತರಗತಿಗಳಿಗೆ ಕ್ಯಾರಿ ಓವರ್ ಹಳೆ ಪದ್ಧತಿಯನ್ನು ಮುಂದುವರೆಸುವಂತೆ ಆಗ್ರಹಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಶ್ರೀರಾಮ ಸೇನೆಯ ನಗರ ವಿದ್ಯಾರ್ಥಿ ಪ್ರಮುಖ್ ಧನುಷ್, ರಕ್ಷಿತ್ ಹಾಗೂ ತಾಲೂಕು ಘಟಕದ ಮುಖಂಡ ರಂಜಿತ್ ಬಿ.ವಿ. ಶೆಟ್ಟಿ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು.
ಡಿಪ್ಲೋಮಾ ತರಗತಿಗಳಲ್ಲಿ ಈ ಹಿಂದೆ ಕ್ಯಾರಿ ಓವರ್ ಪದ್ಧತಿ 10 ವಿಷಯಗಳಿಗೆ ನೀಡುತ್ತಿದ್ದರು. ಆದರೆ, ಈ ಬಾರಿ ಈ ಪದ್ಧತಿಯನ್ನು 4 ವಿಷಯಗಳಿಗೆ ಸೀಮಿತಗೊಳಿಸಿದ್ದು, ಇದರಿಂದ ಹಲವು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಅದುದರಿಂದ ಈ ಹಿಂದಿನ ಕ್ಯಾರಿ ಓವರ್ ಪದ್ಧತಿಯಂತೆ 10 ವಿಷಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಡೂರು
ರಾಜ್ಯ ಸರ್ಕಾರ ಡಿಪ್ಲೋಮೋ ವಿದ್ಯಾರ್ಥಿಗಳಿಗೆ ಹಿಂದೆ ಇದ್ದ ಕ್ಯಾರಿ ಓವರ್ ಪದ್ಧತಿಯನ್ನೇ ಮುಂದುವರಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾ ಯುವ ಜೆಡಿಎಸ್ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸನ್ನ ಸರ್ಕಾರವನ್ನು ಒತ್ತಾಯಿಸಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಪ್ರಸನ್ನ, ಡಿಪ್ಲೊಮೋ ವಿದ್ಯಾರ್ಥಿಗಳಿಗೆ ಈ ಬಾರಿಯ ಶೈಕ್ಷಣಿಕ ವರ್ಷದ ತರಗತಿಗಳು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಕಳೆದ ವರ್ಷ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಅಭ್ಯಾಸಕ್ಕೆ ತೊಂದರೆಯಾಗದಂತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉಳಿದ ವಿಷಯಗಳನ್ನು ಪಾಸು ಮಾಡುಳ್ಳುವಂತೆ ಅವಕಾಶ ನೀಡುವ ಕ್ಯಾರಿ ಓವರ್ ಪದ್ಧತಿ ಮುಂದುವರಿಸಿತ್ತು ಎಂದರು.
ಭವಿಷ್ಯಕ್ಕೆ ಕುತ್ತು: ಆದರೆ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಈ ಬಗ್ಗೆ ಕೂಲಂಕುಷವಾಗಿ ಪರಿಗಣಿಸದೆ ಕೇವಲ ನಾಲ್ಕು ವಿಷಯಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೆ, ಅಂತಹ ವಿದ್ಯಾರ್ಥಿಗೆ ಮುಂದಿನ ವರ್ಷದ ತರಗತಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಆದೇಶ ಹೊರಡಿಸಿ ವಿದ್ಯಾರ್ಥಿಗಳ ಭವಿಷ್ಯ ಮಣ್ಣುಪಾಲು ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಡಿಪ್ಲೊಮಾ ವಿದ್ಯಾರ್ಥಿಗಳು ಪ್ರತೀ ಶೈಕ್ಷಣಿಕ ವರ್ಷವೂ ಕೂಡ ಇದೇ ರೀತಿಯ ಸಮಸ್ಯೆ ಎದುರಿಸುವ ಮೂಲಕ ಪ್ರತಿಭಟನೆ ಹಾದಿ ತುಳಿಯುತ್ತಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ವಿದ್ಯಾರ್ಥಿಗಳಿಗೆ ಕ್ಯಾರಿ ಓವರ್ ಪದ್ಧತಿಯನ್ನು ಸರ್ಕಾರ ರದ್ದುಪಡಿಸಲು ಮುಂದಾದಾಗ ಸರ್ಕಾರ ತನ್ನ ನಿರ್ಧಾರ ಬದಲಿಸಿ ಮತ್ತೆ ಅವಕಾಶ ನೀಡಿತ್ತು ಎಂದರು.
ಈ ಬಗ್ಗೆ ಕೂಡಲೇ ಉನ್ನತ ಶಿಕ್ಷಣ ಸಚಿವರು ಸರ್ಕಾರದೊಂದಿಗೆ ಸಮಾಲೋಚಿಸಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹಿಂದಿನಂತೆ ಕ್ಯಾರಿ ಓವರ್ ಪದ್ಧತಿ ಮುಂದುವರಿಸಿ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಸನ್ನ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.