ಶ್ವೇತಪತ್ರ ಹೊರಡಿಸಲು ಸಿ.ಟಿ. ರವಿ ಆಗ್ರಹ
ಕಪ್ರ ವಾರ್ತೆ , ಚಿಕ್ಕಮಗಳೂರು , ಜು.12
ಹಿಂದಿನ ಬಿಜೆಪಿ ಸರ್ಕಾರದ ಬಗ್ಗೆ ಟೀಕೆ ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಐದು ವರ್ಷಗಳ ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಬಜೆಟ್ ಒಂದು ಲಕ್ಷ ಕೋಟಿ ದಾಟಿದಾಗ ಎಲ್ಲಿದೆ ಸಂಪನ್ಮೂಲ. ಇದು, ಅಂಕಿಅಂಶದ ಕಸರತ್ತು ಎಂದು ಟೀಕೆ ಮಾಡಿದ್ದರು. ಆದರೆ, ಅವರು, ಇದೀಗ ಮಂಡಿಸಿರುವ ರಾಜ್ಯ ಬಜೆಟ್ 1.20 ಲಕ್ಷ ಕೋಟಿ ರುಪಾಯಿ ದಾಟಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ವೇತ ಪತ್ರ ಹೊರಡಿಸಬೇಕು: ಹಿಂದಿನ ಸರ್ಕಾರದ ಆರ್ಥಿಕ ಸ್ಥಿತಿಗತಿ ಸರಿ ಇಲ್ಲದೆ ಹೋಗಿದ್ದರೆ ಇಷ್ಟು ದೊಡ್ಡ ಬಜೆಟ್ ಮಂಡನೆ ಸಾಧ್ಯವಾಗುತ್ತಿತ್ತಾ ಎಂದು ಪ್ರಶ್ನಿಸಿದ ಸಿ.ಟಿ. ರವಿ, ಹಿಂದಿನ ಸರ್ಕಾರ ಆರ್ಥಿಕ ಸ್ಥಿತಿಗತಿಯ ಬಗ್ಗೆ ಮುಖ್ಯಮಂತ್ರಿಯವರು ಜನರಿಗೆ ತಿಳಿಸಿಕೊಡಲು ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು. ಹಿಂದಿನ ಸರ್ಕಾರ ಅಬಕಾರಿಯಿಂದ 4 ಸಾವಿರ ಕೋಟಿ ರುಪಾಯಿ ಆದಾಯ ನಿರೀಕ್ಷಿಸಿತ್ತು. ಸಾರಾಯಿ ನಿಷೇಧ ಮಾಡಿದರೂ ಅಬಕಾರಿ ಆದಾಯ 11 ಸಾವಿರ ಕೋಟಿ ರುಪಾಯಿ ಬಂದಿದೆ. ಇದೀಗ ಅಬಕಾರಿ ಸುಂಕವನ್ನು ಶೇ. 16 ರಿಂದ ಶೇ. 40 ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಮದ್ಯದ ಬೆಲೆ ದುಬಾರಿಯಾಗಲಿದೆ. ಅಗ್ಗದ ಮದ್ಯ ಕೊಡುವ ಉದ್ದೇಶ ಇವರದ್ದಾಗಿರಬಹುದು ಎಂದು ಟೀಕಿಸಿದರು.
ಸಾಲದ ಪ್ರಮಾಣ ಏರಿಕೆ: 22,731 ಕೋಟಿ ರುಪಾಯಿ ಜಮಾದಲ್ಲಿ ತೋರಿಸಲಾಗಿದೆ. ಅಂದರೆ ಸಾಲದ ಪ್ರಮಾಣ ಶೇ. 18ಕ್ಕೆ ಏರಿಕೆಯಾಗಿದೆ. ಹೇಳಿರುವುದು ಒಂದಾದರೆ ಮಾಡಿರುವುದು ಮತ್ತೊಂದು ಆಗಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೆಲವು ಕಾರ್ಯಕ್ರಮಗಳನ್ನು ಮುಂದುವರೆಸಲಾಗುವುದೆಂದು ಮುಖ್ಯಮಂತ್ರಿಯವರು ಹೇಳಿದ್ದಾರೆ. ಅವುಗಳಲ್ಲಿ ಯಾವುದನ್ನು ಉಳಿಸಲಾಗುತ್ತದೆ, ಯಾವುದನ್ನು ಕೈಬಿಡಲಾಗುತ್ತದೆ ಎಂಬುದು ತಿಳಿಯದಾಗಿದೆ. ಹಳೆಯ ಕಾರ್ಯಕ್ರಮಗಳನ್ನು ಮುಂದುವರೆಸಿದರೆ ಬಜೆಟ್ನ ಗಾತ್ರ ಇನ್ನಷ್ಟು ದೊಡ್ಡದಾಗಲಿದೆ. ಆಗ ಜನರ ಮೇಲೆ ಹೊಸ ತೆರಿಗೆ ಹಾಕಬೇಕಾಗುತ್ತದೆ, ಇಲ್ಲವೇ ಹೊಸದಾಗಿ ಸಾಲ ತರಬೇಕಾಗುತ್ತದೆ ಎಂದು ವಿಶ್ಲೇಷಿಸಿದರು.
ಕೃಷಿ, ಕೈಗಾರಿಕೆ, ನಗರಾಭಿವೃದ್ಧಿಗಳಿಗೆ ಬಿಜೆಪಿ ಸರ್ಕಾರ ಮೀಸಲಿಟ್ಟಷ್ಟು ಹಣ ಈ ಬಜೆಟ್ನಲ್ಲಿ ನೀಡಿಲ್ಲ. ಬಡವರಿಗೆ 3 ಲಕ್ಷ ಮನೆಗಳನ್ನು ನೀಡಲಾಗುವುದು. ಆ ಮೂಲಕ ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲಾಗುವುದೆಂದು ಹೇಳಿದ್ದಾರೆ. ಈ ಕಾರ್ಯಕ್ರಮ ಜಾರಿಗೆ ತರಲು 3,750 ಕೋಟಿ ರುಪಾಯಿ ಬೇಕು. ಆದರೆ, ಇದೀಗ ವಸತಿಗೆ ಇಟ್ಟಿರುವ ಹಣ 900 ಕೋಟಿ ಮಾತ್ರ. ಗುರಿಗೆ ತಕ್ಕಂತೆ ಬಂಡವಾಳ ಒದಗಿಸಿಲ್ಲ ಎಂದರು.
ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಜನರನ್ನು ಖುಷಿ ಪಡಿಸಲು ಕೆಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇವುಗಳಿಂದ ರಾಜ್ಯದ ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಜಿಲ್ಲೆಗೆ ನಿರಾಶೆ: ಜಿಲ್ಲೆಗೆ ಇದೊಂದು ನಿರಾಶದಾಯಕ ಬಜೆಟ್. ಚಿಕ್ಕಮಗಳೂರಿಗೆ ಕಳೆದ ಸರ್ಕಾರ ಬಜೆಟ್ನಲ್ಲಿ ಹಾಲು ಒಕ್ಕೂಟ ಮಂಜೂರು ಮಾಡಿತ್ತು. ಆದರೆ, ಇದಕ್ಕೆ ಈ ಬಜೆಟ್ನಲ್ಲಿ ಹಣ ಇಟ್ಟಿಲ್ಲ. ಜಿಲ್ಲೆಯ ಹಾಲು ಉತ್ಪಾದಕರ ಕನಸ್ಸಿಗೆ ಮತ್ತು ಹೋರಾಟಕ್ಕೆ ಕಲ್ಲು ಹಾಕುವ ಕೆಲಸ ಈ ಸರ್ಕಾರ ಮಾಡಿದೆ. ಮೆಡಿಕಲ್ ಕಾಲೇಜಿಗೂ ಅನುದಾನ ನೀಡಿಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ಕಡೂರು- ಚಿಕ್ಕಮಗಳೂರು- ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವಂತೆ ಮುಖ್ಯಮಂತ್ರಿಯವರನ್ನು ಆಗ್ರಹಿಸಲಾಗಿತ್ತು. ಈ ಕೆಲಸ ಆಗಿಲ್ಲ. ಅಡಕೆ ಬೆಳೆಗಾರರ ಸಮಸ್ಯೆಗೂ ಸ್ಪಂದಿಸಿಲ್ಲ. ಇದಕ್ಕೆ ಕಾಂಗ್ರೆಸ್ನ ಜನಪ್ರತಿನಿಧಿಗಳು ಹಾಗೂ ನಾಯಕರು ಉತ್ತರ ನೀಡಬೇಕು ಎಂದು ಹೇಳಿದ ಅವರು, ಸೇಡಿನ ರಾಜಕಾರಣ ಮಾಡುವುದನ್ನು ಬಿಟ್ಟು ಜಿಲ್ಲೆಗೆ ಹಣ ತರುವ ಕೆಲಸ ಕಾಂಗ್ರೆಸ್ ಮಾಡಬೇಕು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ವಕ್ತಾರ ಬಿ. ರಾಜಪ್ಪ ಹಾಗೂ ನಗರಸಭಾ ಸದಸ್ಯ ಎಚ್.ಡಿ. ತಮ್ಮಯ್ಯ ಉಪಸ್ಥಿತರಿದ್ದರು.
ಉತ್ತಮ ಬಜೆಟ್
ನರಸಿಂಹರಾಜಪುರ: ಸಿದ್ದರಾಮಯ್ಯ ಅವರು ಅತ್ಯುತ್ತಮ ಬಜೆಟ್ ನೀಡಿದ್ದು ವಿರೋದ ಪಕ್ಷಗಳು ವಿರೋದಕ್ಕಾಗಿ ವಿರೋದ ಮಾಡುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿ, ಬಜೆಟ್ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಅನ್ಯಾಯವಾಗಿದೆ ಎಂದು ವಿರೋದ ಪಕ್ಷಗಳ ಮುಖಂಡರು ಟೀಕಿಸಿದ್ದಾರೆ. ಸಿದ್ದರಾಮಯ್ಯ ಅವರು ಎಲ್ಲ ಕ್ಷೇತ್ರವನ್ನು ಗಮನದಲ್ಲಿಟ್ಟು ಇಟ್ಟುಕೊಂಡು ಉತ್ತಮ ಬಜೆಟ್ ಮಂಡಿಸಿದ್ದಾರೆ. ವಿದ್ಯಾರ್ಥಿಗಳು,ಬಡವರು, ರೈತರಿಗೆ ಬಜೆಟ್ನಿಂದ ಅನುಕೂಲವಾಗಲಿದೆ. ರೈತರಿಗೆ 2 ಲಕ್ಷ ರುಪಾಯಿಗಳ ವರೆಗೆ ಬಡ್ಡಿರಹಿತ ಸಾಲ ನೀಡುವ ಯೋಜನೆ ಪ್ರಕಟಿಸಿದ್ದಾರೆ. 1 ಸಾವಿರ ಕೋಟಿ ಮೊತ್ತದ ಕೃಷಿ ಬೆಂಬಲ ಬೆಲೆ ಆವೃತ್ತ ನಿಧಿ ಸ್ಥಾಪನೆಗೆ ಮುಂದಾಗಿದ್ದಾರೆ. ಇದು ರೈತರ ಪರ ಬಜೆಟ್ ಎಂದು ಅವರು ತಿಳಿಸಿದ್ದಾರೆ.