ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಿಲ್ಲೆಗೆ ಬಜೆಟ್ ಕೊಡುಗೆ ಸೊನ್ನೆ

Lingaraj Badiger
Updated On : 15 Jul 2013, 10:40 am

ಕ.ಪ್ರ.ವಾರ್ತೆ, ನ.ರಾ.ಪುರ,  ಜು.14
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಚಿಕ್ಕಮಗಳೂರು ಜಿಲ್ಲೆಗೆ ಮಾತ್ರ ಸೊನ್ನೆಯಾಗಿದ್ದು, ಇದು ಜಿಲ್ಲೆಯ ಕಾಂಗ್ರೆಸ್ ಮುಖಂಡರ ವೈಫಲ್ಯವೂ ಹೌದು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಟೀಕಿಸಿದರು.
ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರ 8 ನೇ ಬಜೆಟ್ ಬಗ್ಗೆ ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಮಲೆನಾಡಿನ ಅಡಿಕೆ ಹಳದಿ ಎಲೆ ರೋಗದ ಸಮಸ್ಯೆ ಪ್ರಸ್ತಾಪವೇ ಇಲ್ಲ. ಗುಟ್ಕಾ ಬ್ಯಾನ್ ಮಾಡಿದ್ದಾರೆ. ಮುಂದೆ ಅಡಿಕೆ ಬೆಲೆ ಕುಸಿತವಾದರೆ ಮುಂದಿನ ಪರಿಹಾರ ಸೂಚಿಸಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಚರ್ಚೆ ನಡೆಸಿಲ್ಲ: ಅಡಕೆ ಹಳದಿ ಎಲೆ ರೋಗದ ಸಮೀಕ್ಷೆ ಮಾಡಿದ್ದ ಡಾ. ಗೋರಕ್ ಸಿಂಗ್ ವರದಿ ಬಗ್ಗೆ ಚರ್ಚೆ ನಡೆಸಿಲ್ಲ. ಚಿಕ್ಕಮಗಳೂರು ಜಿಲ್ಲೆಗೆ ಹಾಲಿನ ಡೈರಿ ಪ್ರಸ್ತಾಪ ಇಲ್ಲ. ಮಲೆನಾಡಿನ ಜ್ವಲಂತ ಸಮಸ್ಯೆಯಾದ ಅರಣ್ಯ ಒತ್ತುವರಿ ಸಮಸ್ಯೆ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ ಎಂದು ಅವರು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯ 5 ಜನ ಶಾಸಕರು ಪಕ್ಷ ಭೇದ ಮರೆತು ಮಲೆನಾಡಿನ ಸಮಸ್ಯೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕು. ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಮಲೆನಾಡಿಗೆ ಆಗಿರುವ ಅನ್ಯಾಯದ ಹೊಣೆಯನ್ನು ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಲೋಕಸಭಾ ಸದಸ್ಯ ಜಯಪ್ರಕಾಶ ಹೆಗಡೆ ಹೊರಬೇಕಾಗಿದೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ನಾಯಕರು ಉತ್ತರಿಸಬೇಕು ಎಂದು ರಾಜೇಂದ್ರ ಹೇಳಿದರು.
ಬರಿಯ ಲೆಕ್ಕಾಚಾರವಲ್ಲ: ಬಜೆಟ್ ಎಂದರೆ ಬರೀ ಲೆಕ್ಕಾಚಾರವಲ್ಲ. ಸರ್ಕಾರದ ಮುಂದಿನ ನಡವಳಿಕೆಯ ದಿಕ್ಸೂಚಿಯಾಗಿರುತ್ತದೆ. ರಾಜ್ಯದ ದೃಷ್ಟಿಯಿಂದ ಬಜೆಟ್ ಪರವಾಗಿಲ್ಲ. ಆದರೆ ಚಿಕ್ಕಮಗಳೂರು ಜಿಲ್ಲೆಯ ಜನತೆ ಮಾತ್ರ ಬಜೆಟ್ ಲಾಭ ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಅರಣ್ಯ ಒತ್ತುವರಿ ಸಮಸ್ಯೆ ಬಗೆಹರಿಸದಿದ್ದರೆ ಆಗಸ್ಟ್ ತಿಂಗಳ ನಂತರ ಜೆಡಿಎಸ್ ಮುಖಂಡರ ಜೊತೆ ಚರ್ಚೆ ನಡೆಸಿ  ಹೋರಾಟ ಪ್ರಾರಂಭಿಸುತ್ತೇವೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಅವರು ಎಚ್ಚರಿಕೆ ನೀಡಿದರು.
ಜೆಡಿಎಸ್  ಒತ್ತುವರಿ ಸಮಸ್ಯೆ ಬಗ್ಗೆ ಮೊದಲು ಸ್ಪೀಕರ್ ಅವರಿಗೆ ಪತ್ರ ಬರೆದು ಅರಣ್ಯ ಒತ್ತುವರಿ ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ. ಅವರು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮುಂದುವರಿಸುತ್ತೇವೆ ಎಂದರು.
5 ಸಾವಿರ ಕುಟುಂಬ ಬೀದಿಗೆ: ಶೃಂಗೇರಿ ಕ್ಷೇತ್ರದಲ್ಲಿ ಅಂದಾಜು 5,000 ಜನರು ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. 12 ಸಾವಿರ ಕೂಲಿ ಕಾರ್ಮಿಕರು, ಬಡವರು ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಎಂಪವರ್ ಕಮಿಟಿ ನಿರ್ದೇಶನ ನೀಡಿದರೆ ಎಲ್ಲರೂ ಬೀದಿಗೆ ಬರಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಡಾ. ಗೋರಕ್ ಸಿಂಗ್ ವರದಿ ಜಾರಿಗೆ ತಂದಿದ್ದೇವೆ ಎಂದು ಕಾಂಗ್ರೆಸ್‌ನವರು ಸುಳ್ಳು ಹೇಳುವುದನ್ನು ಇನ್ನಾದರೂ ಬಿಡಬೇಕು. ರೈತರ ಸಾಲ ಮನ್ನಾ ಮಾಡಿಲ್ಲ. ಲೋಕಸಭಾ ಸದಸ್ಯ ಜಯಪ್ರಕಾಶ ಹೆಗ್ಡೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದರು.
ಮಲೆನಾಡಿನ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತಿಲ್ಲ. 2008 ರ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ಅವರು ಲೋಕಸಭೆಯಲ್ಲಿ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಹೊಸೂರು  ಸುರೇಶ್, ತಾಪಂ ಸದಸ್ಯ ಎಸ್.ಎಸ್. ಶಾಂತಕುಮಾರ್, ಜೆಡಿಎಸ್ ನಗರ ಅಧ್ಯಕ್ಷ ಸತ್ಯನಾರಾಯಶೆಟ್ಟಿ, ಜೆಡಿಎಸ್ ಪಪಂ ಸದಸ್ಯ ಸುಬಾನ್, ಮುಖಂಡ  ಎಂ.ಒ. ಜೋಯಿ, ನಾಗರಾಜ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement