ಭದ್ರೆ ಹರಿದರೂ ಬಾಯಾರಿಕೆ ನೀಗಲಿಲ್ಲ
ತರೀಕೆರೆ: ನೂರಾರು ಕಿ.ಮೀ ದೂರದಲ್ಲಿರುವ ಚಿತ್ರದುರ್ಗ ಜಿಲ್ಲೆ ಮತ್ತು ಕೋಲಾರ ಜಿಲ್ಲೆಗಳಿಗೆ ಭದ್ರಾ ನದಿಯಿಂದ ನೀರು. ಆದರೆ ಕೇವಲ ಕೆಲವೇ ಕಿ.ಮೀ ಅಂತರದಲ್ಲಿರುವ ತರೀಕೆರೆ ತಾಲೂಕಿಗೆ ಮಾತ್ರ ಒಂದು ಹನಿ ನೀರಿಲ್ಲ.
ಅಷ್ಟೇಕೆ ಪಕ್ಕದಲ್ಲೇ ಇರುವ ಹಲವು ಊರುಗಳಿಗೆ ಭದ್ರಾ ನದಿಯ ಶುದ್ದ ಸಿಹಿ ನೀರು, ಆದರೆ ತರೀಕೆರೆ ನಾಗರೀಕರಿಗೆ ಮಾತ್ರ ದುರ್ವಾಸನೆಯಿಂದ ಕೂಡಿರುವ ಮಾನಸಿ ಕೆರೆಯ ನೀರು. ಮಾನಸಿ ಕೆರೆಯ ಪರಿಸರವನ್ನುಮತ್ತು ಕೆರೆಯ ನೀರಿನ ಸಾಕ್ಷಾತ್ ದರ್ಶನವನ್ನು ಯಾರಾದರೂ ಮಾಡಿಕೊಂಡು ಬಂದರೆ, ದೇವರಾಣೆ ಯಾರೂ ಒಂದು ಹನಿ ನೀರು ಕುಡಿಯಲು ಮನಸ್ಸು ಬರುವುದಿಲ್ಲ.
ಯಾವಾಗಲೂ ಬರ: ತರೀಕೆರೆ ತಾಲೂಕಿನಲ್ಲಿ ಸಮೃದ್ಧ ಮಳೆಯನ್ನು ಕಂಡು ಅದೆಷ್ಟೋ ವರ್ಷಗಳು ಉರುಳಿಹೋಗಿವೆ. ಗಟ್ಟಿ ಮಳೆ ಸುರಿದು ತಾಲೂಕಿನ ಕೆರೆಗಳು ಭರ್ತಿಯಾಗಿ ಕೆರೆ ಕೋಡಿ ಹರಿದ ಸುದ್ದಿ ಕೇಳಿ ಯಾವ ಜಮಾನವಾಯಿತೋ ಗೊತ್ತೇ ಇಲ್ಲ. ತಾಲೂಕಿನ ಜಮೀನು ತೋಟ ಹೊಲ ಗದ್ದೆಗಳಿಗೆ ಕೆರೆಗಳಿಗೆ ಮಳೆಯ ನೀರೇ ಆಶ್ರಯ. ಮಳೆ ಬಂದರೆ ರೈತರ ಕೈಗೆ ಅಂಗೈ ಮುಚ್ಚುವಷ್ಟು ಬೆಳೆ. ಇಲ್ಲದಿದ್ದರೆ ವರ್ಷವೆಲ್ಲಾ ಹಸಿದ ಹೊಟ್ಟೆಯೇ ಗತಿ.
ಅಳಿದುಳಿದಿರುವ ತಾಲೂಕಿನ ಹಸಿರು ಪ್ರದೇಶಗಳಲ್ಲಿ ದೂರದ ಊರಿಗೆ ಭದ್ರಾ ನದಿ ನೀರು ಹಾಯಿಸಿಲು ಬೃಹದಾಕಾರವಾದ ಕಾಲುವೆ ತೋಡಿ ತಾಲೂಕಿನ ಭೂ ಪ್ರದೇಶದಲ್ಲಿರುವ ಅಂತರ್ಜಲವು ಬತ್ತಿ ಹೋಗುವ ಭಯ ಜನರನ್ನು ಕಾಡುತ್ತಿದೆ. ಈ ಪ್ರದೇಶದಲ್ಲಿದ್ದ ಅಲ್ಪಸ್ವಲ್ಪ ಅರಣ್ಯವು ಬರಿದಾಗುವ ಲಕ್ಷಣ ಕಾಣುತ್ತಿದೆ.
ನೀರು ಬೇರೆಡೆಗೆ: ಭದ್ರಾ ನದಿಗೆ ಅಣೆಕಟ್ಟನ್ನು ತರೀಕೆರೆ ತಾಲೂಕಿನಲ್ಲೇ ಕಟ್ಟಲಾಗಿದೆ. ಆದರೆ ಭದ್ರಾ ಜಲಾಶಯದ ಪೂರ್ಣ ಪ್ರಯೋಜನ ತರೀಕೆರೆ ತಾಲೂಕಿಗೆ ಈವರೆವಿಗೆ ಲಭ್ಯವಾಗದೇ ಇರುವುದಕ್ಕೆ ಯಾರನ್ನು ದೂರಬೇಕು ತಿಳಿಯದಾಗಿದೆ.
ತರೀಕೆರೆ ಹೆಸರೇ ಹೇಳುವಂತೆ ಸುತ್ತಲೂ ಕೆರೆಗಳಿಂದ ತುಂಬಿದ ಪ್ರದೇಶವೆಂದು ಬೇರೆ ಹೇಳಬೇಕಾಗಿಲ್ಲ. ಆದರೆ ಸುತ್ತಲಿನ ನಾಗೇನಹಳ್ಳಿ-ರಂಗಾಪುರ-ಅಣ್ಣೇ ಗುಡ್ಡ ಪ್ರದೇಶಗಳಲ್ಲಿ, ಸಮೀಪದ ಭದ್ರಾ ಅಭಯಾರಣ್ಯದಲ್ಲಿ ಮತ್ತು ಕಲ್ಲತ್ತಿಗಿರಿ ಕೆಮ್ಮಣಗುಂಡಿ ತಣಿಗೇಬೈಲು ಜಲಾನಯನ ಪ್ರದೇಶಗಳಲ್ಲಿ ಹಿಂದೆ ಬೀಳುತ್ತಿದ್ದ ಸೂರು ನಿಲ್ಲದಂತಹ ಮಳೆಯಾಗಬೇಕು. ಹಾಗಿದ್ದರೆ ಮಾತ್ರ ತರೀಕೆರೆ ತಾಲೂಕಿನ ಕೆರೆಗಳಿಗೆ ನೀರು ಹಾಗು ತಾಲೂಕಿನ ಭೂಪ್ರದೇಶದ ಅಂತರ್ಜಲ ವೃದ್ದಿ ಸಾಧ್ಯ. ಅಸಲಿ ಮಾತೆಂದರೆ ಈಚೆಗೆ ಒಂದು ಕೆರೆಯೂ ತುಂಬಿಲ್ಲ.
ಹಲವಾರು ಹೋರಾಟ: ತರೀಕೆರೆ ತಾಲೂಕಿನ ಶಾಶ್ವತವಾದ ನೀರಾವರಿ ಯೋಜನೆಯಾಗಬೇಕೆಂದು ಅನೇಕ ಸಲ ಗಮನ ಸೆಳೆಯುವ ಹೋರಾಟಗಳು ನೆಡೆಯುತ್ತಿವೆ, ಮೇಲಿಂದ ಮೇಲೆ ಆಯ್ಕೆಯಾದ ಜನಪ್ರತಿನಿಧಿಗಳು, ನೀರಾವರಿ ವಿಚಾರದಲ್ಲಿ ಸರ್ಕಾರಗಳು ಈ ಭಾಗದ ರೈತರ ಮೂಗಿಗೆ ತುಪ್ಪ ಸವರುತ್ತೆಲೇ ಬಂದಿದೆಯ ಹೊರತು ಯಾವ ನೀರಾವರಿ ಯೋಜನೆಗಳು ಇಲ್ಲಿಯವರೆಗೆ ಕಾರ್ಯಗತವಾಗಿಲ್ಲ. ಬದಲಿಗೆ ಇಲ್ಲಿರುವ ನೀರನ್ನೇ ಬೇರೆಡೆಗೆ ತೆಗೆದುಕೊಂಡು ಹೋಗುವ ಹುನ್ನಾರ ನಿರಂತರವಾಗಿ ನೆಡೆಯುತ್ತಿದೆ.
ಹೊಸ ಸರ್ಕಾರವಾದರೂ ತರೀಕೆರೆ ತಾಲೂಕಿಗೆ, ಮೂಲಭೂತ ಸೌಕರ್ಯಗಳು ಮತ್ತು ಶಾಶ್ವತ ನೀರಾವರಿ ಕಲ್ಪಿಸಿಕೊಡಬೇಕೆಂಬುದು ತಾಲೂಕಿನ ರೈತಾಪಿ ಜನರ ಆಶಯ.
- ಅನಂತ ನಾಡಿಗ್