'ಕೃಷಿ ಚಟುವಟಿಕೆ ಚುರುಕು'
ನರಸಿಂಹರಾಜಪುರ: ತಾಲೂಕಿನಾದ್ಯಂತ ಬತ್ತದ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ರೈತರು ಸಸಿ ಮುಡಿ ತಯಾರಿಕೆ, ನಾಟಿಗಾಗಿ ಭೂಮಿ ಸಿದ್ಧತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲೂಕಿನ 5,200 ಹೆಕ್ಚೇರ್ ಪ್ರದೇಶದಲ್ಲಿ ಬತ್ತ ಬೆಳೆಲಾಗುತ್ತಿದ್ದು, ಮುತ್ತಿನಕೊಪ್ಪ, ಕುಸುಬೂರು, ಕೆ.ಕಣಬೂರು, ಶೆಟ್ಟಿಕೊಪ್ಪ, ನೇರ್ಲೆಕೊಪ್ಪ, ಬಾಳೆಕೊಪ್ಪ ಮುಂತಾದ ಗ್ರಾಮಗಳಲ್ಲಿ ನಾಟಿ ಕಾರ್ಯ ಪ್ರಾರಂಭಗೊಂಡಿದೆ.
ಹೈಬ್ರಿಡ್ ಬತ್ತದ ತಳಿಗಳಾದ ಜಯ, ಎಂ.ಟಿ.ಯು 101, ಸಣ್ಣ ಐ.ಇ.ಟಿ, ಜೆ.ಜಿ.ಎಲ್ 1798 ಬತ್ತದ ತಳಿಗಳ ಸಸಿ ಮುಡಿಯನ್ನು ತಯಾರಿಸಲಾಗಿದೆ. ಗದ್ದೆ ಅಂಚುಗಳನ್ನು ಕಡಿಯುವ ಕಾರ್ಯ ಬಿರುಸುಗೊಂಡಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ಈ ವರ್ಷ ನೀರಿಗೆ ತೊಂದರೆಯಾಗಿಲ್ಲ. ಮಕ್ಕಿಗದ್ದೆಗಳಲ್ಲೂ ನೀರು ಹರಿಯುತ್ತಿದೆ. ಮುಂದಿನ ಒಂದು ವಾರದಲ್ಲೇ ತಾಲೂಕಿನ ಉಳಿದ ಗ್ರಾಮಗಳಲ್ಲೂ ನಾಟೀ ಕಾರ್ಯ ಬಿರುಸುಗೊಳ್ಳಲಿದೆ.
ಕಳೆ ನಾಶಕ ಸಿಂಪಡಿಸಿ: ಬತ್ತದ ಗದ್ದೆಗಳಿಗೆ ನಾಟಿ ಮಾಡಿದ 3 ರಿಂದ 5 ದಿನದ ನಂತರ ಕಳೆ ನಾಶಕ ಮರಳಿನೊಂದಿಗೆ ಮಿಶ್ರ ಮಾಡಿ, ಗದ್ದೆಗಳಿಗೆ ಹರಡಬೇಕು ಎಂದು ಕೃಷಿ ಇಲಾಖೆ ರೈತರಿಗೆ ಸಲಹಗೆ ನೀಡಿದೆ.
ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಬೈರಾಪುರ, ಕೆ. ಕಣಬೂರು ಮುಂತಾದ ಗ್ರಾಮಗಳಲ್ಲಿ 150 ಹೆಕ್ಟೆರ್ ಪ್ರದೇಶದಲ್ಲಿ ಮುಸುಕಿನ ಜೋಳದ ಬಿತ್ತನೆ ಕಾರ್ಯ ಪ್ರಾರಂಭಗೊಂಡಿದೆ.
ಈ ವರ್ಷದ ಅತಿ ಮಳೆಯಿಂದಾಗಿ ಮಲೆನಾಡಿನ ಭಾಗದಲ್ಲಿ ಅಡಿಕೆ ತೋಟಗಳಿಗೆ ಹಾನಿ ಸಂಭವಿಸುತ್ತಿದ್ದು, ಅಲ್ಲಲ್ಲಿ ಎಳೆ ಅಡಿಕೆ ಕಾಯಿ ಉದರಲು ಪ್ರಾರಂಭವಾಗಿದೆ. ಮೇ 28ಕ್ಕೆ ಪ್ರಾರಂಭಗೊಂಡ ಮಳೆ ಬಿಡುವಿಲ್ಲದೆ ಸುರಿಯುತ್ತಿದ್ದು, ಶೀತದ ವಾತಾವರಣ ಉಂಟಾಗಿ ಅಡಕೆ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಳೆಯಿಂದಾಗಿ ಕೊಳೆ ನಿರೋಧಕ ದಕ ಬೋರ್ಡೋ ಸಿಂಪರಣೆ ಸಾಧ್ಯವಾಗದೆ ಅಡಕೆ ಬೆಳೆಗಾರರು ಚಿಂತೆಗೀಡಾಗಿದ್ದಾರೆ.