ಟೆಕ್ನಿಕಲ್ ಹುದ್ದೆ ನೇಮಕಾತಿ ರ್ಯಾಲಿ
ಚಿಕ್ಕಮಗಳೂರು: ಭಾರತೀಯ ವಾಯುಪಡೆಯಲ್ಲಿ ಏಷ್ಯನ್ ಟೆಕ್ನಿಕಲ್ ಹುದ್ದೆಗಳ ನೇಮಕಾತಿ ರ್ಯಾಲಿ ಜು.31ರಂದು ಕೊಪ್ಪಳದ ಜಿಲ್ಲಾ ಒಳಾಂಗಣ ಕ್ರೀಡಾಂಗಣ (ಬಾಡ್ಯಿಂಟನ್ ಕೋರ್ಟ್ ಹಾಲ್) ದಲ್ಲಿ ನಡೆಯಲಿದೆ. 1993ಮೇ 1ರಿಂದ 1996 ನವೆಂಬರ್ 30ರೊಳಗೆ ಜನಿಸಿದ ಅವಿವಾಹಿತ ಪುರುಷರು, ಪಿಯುಸಿಯ ವಿಜ್ಞಾನ ವಿಷಯದಲ್ಲಿ ಅಥವಾ ಡಿಪ್ಲೊಮೋದಲ್ಲಿ ಶೇ.50ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದವರು ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಬಹುದು.
ಆದಾಯ ಪರಿಷ್ಕರಣೆ
ಪ್ರಸಕ್ತ ಸಾಲಿನಲ್ಲಿ ಮೆಟ್ರಿಕ್ ನಂತರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿಯನ್ನು 2 ಲಕ್ಷಗಳಿಂದ 2.50 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತರೀಕೆರೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೀಮೆಎಣ್ಣೆ ಬಿಡುಗಡೆ
ಜುಲೈ ಮಾಹೆಗೆ ಜಿಲ್ಲೆಯ ಗ್ಯಾಸ್ ರಹಿತ ಪಡಿತರ ಚೀಟಿ ಹೊಂದಿದ ಪಟ್ಟಣ ಪ್ರದೇಶದವರಿಗೆ 5 ಲೀಟರ್ ಮತ್ತು ಅನೌಪಚಾರಿಕ ಪಡಿತರ ಪ್ರದೇಶದವರಿಗೆ 5 ಲೀ. ಹಾಗೂ ಗ್ರಾಮಾಂತರ ಪ್ರದೇಶದವರಿಗೆ 5 ಲೀಟರ್‌ನಂತೆ ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ. ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯಿಂದ ತಿಂಗಳ ಒಳಗೆ ಪಡೆಯಬಹುದು ಎಂದು ಆಹಾರ ಇಲಾಖೆಯ ಪ್ರಕಟಣೆ ತಿಳಿಸಿದೆ.
ಪರಿಸರ, ಸಮಾಜ ಕುರಿತು ಚಿಂತನೆ ಅಗತ್ಯ
ಮೂಡಿಗೆರೆ: ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಯತ್ತ ಗಮನ ಕೊಡದೆ ನಮ್ಮ ಸುತ್ತಲಿನ ಪರಿಸರ ಮತ್ತು ಸಮಾಜದಲ್ಲಿ ಆಗುಹೋಗುಗಳ ಬಗ್ಗೆಯೂ ನಾವು ಚಿಂತಿಸಬೇಕು ಎಂದು ಸಂವಹನ ಮತ್ತು ಸಾಮಾಜಿಕ ಜ್ಞಾನಗಳ ವಿಷಯ ತಜ್ಞ ಮಂಗಳೂರಿನ ಡಾ. ವಿಲಿಯಂ ರಾಬರ್ಟ್ ಡಿಸಿಲ್ವ ಹೇಳಿದರು. ತಾಲೂಕಿನ ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆರಂಭಗೊಂಡ ಮೂರು ದಿನಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದ ಅವರು, ದೇಶದಲ್ಲಿ ಶಿಕ್ಷಣದ ಹಕ್ಕು ವ್ಯಾಪಕ ಪ್ರಚಾರ ಪಡೆದಿದ್ದರೂ ಉನ್ನತ ಶಿಕ್ಷಣ ಕೇವಲ ಉದ್ಯೋಗ ಕೊಡಿಸುವ ಉದ್ಯಮವಾಗಿ ಬೆಳೆಯುತ್ತಿದೆ. ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣವನ್ನು ಅಂತರ್ಜಾಲದ ಮುಖಾಂತರ ಎಲ್ಲರಿಗೂ ಹಂಚುವ ಪ್ರಯೋಗ ಯಶಸ್ವಿಯಾಗಿದೆ. ಆದರೆ, ಭಾರತದಲ್ಲಿ ಇದರ ಪ್ರಯತ್ನವೇ ನಡೆದಿಲ್ಲ. ವಿದ್ಯಾರ್ಥಿಗಳು ಅಸುರಕ್ಷತೆ, ಕೀಳರಿಮೆ ಮತ್ತು ಭವಿಷ್ಯದ ಬೀತಿಯಿಂದ ನರಳುತ್ತಿದ್ದಾರೆ ಎಂದು ಹೇಳಿದರು. ಉಪನ್ಯಾಸಕರಿಗೆ ಸೂಕ್ತ ರೀತಿಯ ತರಬೇತಿ ಸಿಕ್ಕರೆ ಮಾತ್ರ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಹೆಚ್ಚುತ್ತದೆ ಎಂದು ಹೇಳಿದರು. ಪ್ರಾಚಾರ್ಯ ರಾದ ಫರ್ಜಾನಾ ಪರ್ವಿನ್, ರೋಟರಿ ಕ್ಲಬ್‌ನ ಅಧ್ಯಕ್ಷ ಬ್ರಹ್ಮದೇವ ಮತ್ತಿತರು ಇದ್ದರು.