ಮತ್ತೆ ಬಂತು ಆಲೂಗಡ್ಡೆಗೆ ಅಂಗಮಾರಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜು.15
ಜಿಲ್ಲೆಯಲ್ಲಿ ಮತ್ತೆ ಆಲೂಗಡ್ಡೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ.
ಕಳೆದ ವರ್ಷ ಬಂಪರ್ ಬೆಲೆಯನ್ನು ಕಂಡಿದ್ದ ಆಲೂಗಡ್ಡೆ ಬೆಳೆಗಾರರಿಗೆ ಈ ವರ್ಷದ ಕನಸಿಗೆ ಈ ರೋಗ ತಣ್ಣೀರು ಎರಚಿದೆ. ಹಾಲಿ ಇರುವ ವಾತಾವರಣ ಮುಂದುವರೆದರೆ, ನೂರಾರು ಎಕರೆ ಬೆಳೆ ಮಣ್ಣು ಪಾಲಾಗಲಿದೆ. ಇದು, ನಿಯಂತ್ರಣಕ್ಕೆ ಬರಬೇಕಾದರೆ ತಕ್ಷಣವೇ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕು. ಇಲ್ಲದೆ ಹೋದರೆ, ಅಪಾರ ನಷ್ಟ ಸಂಭವಿಸಲಿದೆ.
ಮುಂಜಾಗ್ರತೆಯೇ ಮದ್ದು: ಸದ್ಯ ಈ ರೋಗ ಚಿಕ್ಕಮಗಳೂರು ತಾಲೂಕಿನ ಮಳಲೂರು ಗ್ರಾಮದ ಸುತ್ತಮುತ್ತ ಬೆಳೆದಿರುವ ಆಲೂಗಡ್ಡೆಯ ಕೆಲವು ಪ್ರದೇಶದಲ್ಲಿ ಮಾತ್ರ ಕಾಣಿಸಿಕೊಂಡಿದೆ. ಬಹು ಬೇಗ ಹರಡುವ ಗುಣವನ್ನು ಹೊಂದಿರುವ ಅಂಗಮಾರಿ ರೋಗದ ಬಗ್ಗೆ ಉದಾಶೀನತೆ ತೋರುವಂತ್ತಿಲ್ಲ. ಹಾಗೆನಾದರೂ ಎಚ್ಚರ ತಪ್ಪಿದರೆ, ರೋಗ ಪೀಡಿತ ಫಸಲು ಮಾತ್ರವಲ್ಲ, ಸುತ್ತಮುತ್ತಲಿರುವ ಇತರೆ ಆಲೂಗಡ್ಡೆ ಬೆಳೆಗೂ ತಗಲಿದೆ. ಅದುದರಿಂದ ಸಾಮೂಹಿಕವಾಗಿ ಇದರ ನಿಯಂತ್ರಣಕ್ಕೆ ಔಷಧಿ ಸಿಂಪಡನೆ ಸೇರಿದಂತೆ ಇತರೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ.
ಗುರಿ ಮೀರಿ ಬಿತ್ತನೆ: ಜಿಲ್ಲೆಯ ಏಳು ತಾಲೂಕುಗಳ ಪೈಕಿ ಚಿಕ್ಕಮಗಳೂರು ಸೇರಿದಂತೆ ಬಯಲುಸೀಮೆಯ ಮೂರು ತಾಲೂಕುಗಳಲ್ಲಿ ಮುಂಗಾರಿನಲ್ಲಿ ಆಲೂಗಡ್ಡೆ ಬೆಳೆಯುವಲ್ಲಿ ಹೆಚ್ಚಿನ ರೈತರು ಮುಂದೆ ಬರುತ್ತಿದ್ದಾರೆ. ಈ ಸಂಖ್ಯೆ ವರ್ಷ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ.
ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆಯ ಗುರಿ 2500 ಹೆಕ್ಟೇರ್. ಈ ವರ್ಷದಲ್ಲಿ 3100 ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ. ಇದರಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 1450 ಹೆಕ್ಟೇರ್, ಕಡೂರು- 650 ಹೆಕ್ಟೇರ್, ತರೀಕೆರೆ ತಾಲೂಕಿನ 1000 ಹೆಕ್ಟೇರ್ನಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗಿದೆ.
ಹೆಚ್ಚಿನ ಬೆಲೆ: ಪ್ರತಿ ವರ್ಷ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು ಆಲೂಗಡ್ಡೆ ಬೆಳೆ ಬೆಳೆಯುಲ್ಲಿ ಆಸಕ್ತಿ ತೋರುತ್ತಿದ್ದಾರೆ. ಮುಂಗಾರಿನ ಆರಂಭದಲ್ಲಿ ಹಾಸನ ಜಿಲ್ಲೆಯ ಆಲೂಗಡ್ಡೆ ಮಾರುಕಟ್ಟೆ ಬರುತ್ತದೆ. ನಂತರ ಚಿಕ್ಕಮಗಳೂರು ಜಿಲ್ಲೆಯ ಆಲೂಗಡ್ಡೆ ಮಾತ್ರ ಮಾರುಕಟ್ಟೆಗೆ ಬರುವುದರಿಂದ ಹೆಚ್ಚಿನ ಬೆಲೆ ಸಿಗಲಿದೆ.
ಸವಾಲುಗಳು: ಆಲೂಗಡ್ಡೆ ಬೆಳೆಗಾರರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಪ್ರಥಮ ಹಂತದಲ್ಲಿ ಬಿತ್ತನೆ ಬೀಜದ ಖರೀದಿಗೆ ರೈತರು ಹಾಸನ ಜಿಲ್ಲೆಯನ್ನು ಅವಲಂಬಿಸಿದ್ದಾರೆ. ಬೀಜ ಬಿತ್ತನೆಯ ನಂತರ ಗಿಡ ಪಾಲನೆ ಮಾಡಿ ಬೆಳೆ ಕೈ ಸೇರುವವರೆಗೆ ಸಂದರ್ಭಕ್ಕೆ ತಕ್ಕಂತೆ ಬರುವ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಇದರಲ್ಲಿ ಅಂಗಮಾರಿ ರೋಗವು ಸಹ ಒಂದು.
ಕಳೆದ ಎರಡು ವರ್ಷಗಳ ಹಿಂದೆ ನೆರೆಯ ಬೇಲೂರು ತಾಲೂಕಿನಿಂದ ಅಂಗಮಾರಿ ರೋಗ ಚಿಕ್ಕಮಗಳೂರು ತಾಲೂಕು ಪ್ರವೇಶ ಮಾಡಿತು. ಬಳಿಕ ಇದು, ತರೀಕೆರೆ ತಾಲೂಕಿಗೂ ವಿಸ್ತರಿಸಿತು.
ಬೆಳೆ ಬೆಳೆಯಲು ಸಾವಿರಾರು ರುಪಾಯಿ ಖರ್ಚು ಮಾಡಿದ್ದ ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭಿವಿಸಿತ್ತು. ಆದರೆ, ಕಳೆದ ವರ್ಷ ಮಾತ್ರ ಅಂಗಮಾರಿ ರೋಗ ಜಿಲ್ಲೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಆತಂಕದಲ್ಲೇ ಆಲೂಗಡ್ಡೆ ರೈತರಿಗೆ ಬಂಪರ್ ಬೆಲೆ ಸಿಕ್ಕಿತ್ತು. ಇದೇ ಆಸೆಯಿಂದ ಈ ಬಾರಿ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಈಗ ಕಾಣಿಸಿಕೊಂಡಿರುವ ಅಂಗಮಾರಿ ರೋಗ ರೈತರ ನಿದ್ದೆಗೆಡಿಸಿದೆ.
ರೋಗದ ಹುಟ್ಟು: ನಿರಂತರವಾಗಿ ಮಳೆ ಬೀಳುವ ಪ್ರದೇಶದಲ್ಲಿ, ಅಂದರೆ ಸತತವಾಗಿ ಮೂರು ದಿನಗಳ ಕಾಲ ತುಂತುರು ಮಳೆ ಬಂದರೆ. ಆಲೂಗಡ್ಡೆ ಬೆಳೆದಿರುವ ಜಮೀನಿನಲ್ಲಿ 20 ರಿಂದ 25 ಡಿಗ್ರಿ ತಾಪಮಾನ ಇದ್ದರೆ, ಅದರಿಂದ ತೇವಾಂಶ ಹೆಚ್ಚಳವಾಗಿ ಈ ಹುಟ್ಟಿಕೊಳ್ಳಲಿದೆ.
ಆರಂಭದಲ್ಲಿ ಎಲೆಗಳ ಬಣ್ಣ ಹಸಿರಿನಿಂದ ಕಪ್ಪು ಬಣ್ಣಕ್ಕೆ ತಿರುಗಿ, ಬಳಿಕ ಗೆಡ್ಡೆಗೆ ಈ ರೋಗ ಬರಲಿದೆ. ಈ ರೋಗ ಕಾಣಿಸಿಕೊಂಡ ದಿನದಲ್ಲಿ ಕೇವಲ 4 ರಿಂದ 5 ದಿನಗಳಲ್ಲಿ ಇಡೀ ಗಿಡ ನಾಶವಾಗಲಿದೆ. ಇದರ ಹತೋಟಿ ಹಾಗೂ ಮುನ್ನೆಚರಿಕೆ ಕ್ರಮವಾಗಿ ಮ್ಯಾಂಕೋಜೆಬ್ 3 ಗ್ರಾಂ. ಲೀ., ಕರ್ಜೆಟ್ ಮ್ಯಾಗ್ಸಿಮೇಟ್- 2.5 ಗ್ರಾಂ.ಲೀ. ಅಥವಾ ಅಕ್ರೋಬ್ಯಾಟ್ 1 ಗ್ರಾಂ ಲೀ. ಔಷಧವನ್ನು ಸಿಂಪಡಿಸಬಹುದಾಗಿದೆ. ಸರ್ಕಾರ ತೋಟಗಾರಿಕೆ ಇಲಾಖೆಯ ಮೂಲಕ ಒಂದು ಹೆಕ್ಟೇರ್ವರೆಗೆ ಆಲೂಗಡ್ಡೆ ಬೆಳೆದಿರುವ ರೈತರಿಗೆ 5000 ಸಹಾಯಧನ ನೀಡುತ್ತಿದೆ.
ಈವರೆಗೆ ಜಿಲ್ಲೆಯಲ್ಲಿ 15 ಲಕ್ಷ ವಿತರಣೆ ಮಾಡಲಾಗಿದೆ. ಕೊಟ್ಟಿಗೆ ಗೊಬ್ಬರ ಸೇರಿದಂತೆ ಇತರೆ ಕೀಟನಾಶಕಕ್ಕೂ ಸಹಾಯಧನ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ರೈತರು ಬಳಸಿಕೊಂಡಲ್ಲಿ ಮಾತ್ರ. ಈ ರೋಗನಿಯಂತ್ರಣ ಸಾಧ್ಯ.