ನಿವೇಶನಕ್ಕಾಗಿ ನಿರಾಶ್ರಿತರ ನಿರೀಕ್ಷೆ
ಕೊಪ್ಪ, ಜು.16 ತಾಲೂಕಿನ ಭಂಡಿಗಡಿ ಗ್ರಾಪಂ ವ್ಯಾಪ್ತಿಯ ಹರಕನಮಕ್ಕಿಯಲ್ಲಿ ಆಶ್ರಯ ಬಡವಾಣೆ ನಿರ್ಮಾಣವಾಗಿ ವರ್ಷ ಕಳೆದರೂ ಗ್ರಾಪಂ ಸದಸ್ಯರ ಒಮ್ಮತದ ಒಪ್ಪಿಗೆ ನೀಡದಿರುವುದರಿಂದ ಗ್ರಾಮದ ಆರ್ಹ ನಿರಾಶ್ರಿತರು ನಿವೇಶನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಎದುರಾಗಿದೆ.
ಹರಕನಮಕ್ಕಿಯ ಸರ್ವೇ 135 ರಲ್ಲಿ 2 ಎಕರೆ ಜಾಗದಲ್ಲಿ ಆಶ್ರಯ ಬಡವಾಣೆ ನಿರ್ಮಾಣಕ್ಕೆ 2011 ರಲ್ಲಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಸಿಕ್ಕಿದ ಪ್ರಾರಂಭದಲ್ಲಿ ಈ ಜಾಗ ಅರೆಕಲ್ಲು ಗ್ರಾಮದ ರುದ್ರಭೂಮಿಗೆ ಸೇರಿದ್ದು ಎಂದು ನ್ಯಾಯಾಲಯದ ಮೇಟ್ಟಿಲೇರಿದ್ದರಿಂದ ಕೆಲ ತಿಂಗಳ ಕಾಲ ವಿಳಂಬವಾಗಿತ್ತು.
ಅನುಮೋದನೆಗೆ ಕಳುಹಿಸಿಲ್ಲ: ನಂತರ ನ್ಯಾಯಾಲಯದಲ್ಲಿ ಇತ್ಯರ್ಥವಾದ ನಂತರ 44 ನಿವೇಶನ ಹೊಂದಿದ ಆಶ್ರಯ ಬಡವಣೆ ನಿರ್ಮಾಣ ಮಾಡಿದ ನಂತರ 2 ಬಾರಿ ಸಿದ್ಧಪಡಿಸಿದ ಫಲಾನುಭವಿಗಳ ಪಟ್ಟಿಯನ್ನು ಅನುಮೋದನೆಗೆ ಕಳುಹಿಸದೇ ಅಧಿಕಾರಿಗಳು ಹಾಗೇ ಬಿಟ್ಟಿದ್ದರು.
ನಂತರ ಗ್ರಾಮಸ್ಥರ ಒತ್ತಾಯದ ಮೇರೆಗೆ 3 ನೇ ಬಾರಿ 22 ಫಲಾನುಭಾವಿಗಳಿರುವ ಪಟ್ಟಿಯನ್ನು ತಾಪಂ ಕಳುಹಿಸಿತ್ತು. ಆದರೆ ಆಶ್ರಯ ಸಮಿತಿ ಅಧ್ಯಕ್ಷರು ಪೂರ್ಣ 44 ಫಲಾನುಭವಿಗಳ ಪಟ್ಟಿ ಕಳುಹಿಸುವಂತೆ ನಿರ್ದೇಶನ ನೀಡಿದ್ದರಿಂದ ಪಟ್ಟಿ ವಾಪಸ್ಸು ಗ್ರಾಪಂಗೆ ಬಂದಿದೆ. ಮತ್ತೆ ಗ್ರಾಪಂ ಸದಸ್ಯರು ತಮ್ಮ ಸ್ವಹಿತಾಸಕ್ತಿಯಿಂದ ಫಲಾನುಭವಿಗಳ ಪಟ್ಟಿಯನ್ನು ತಯಾರು ಮಾಡುವಲ್ಲಿ ಮೀನಮೇಶ ಎಣಿಸುತ್ತಿರುವುದರಿಂದ ನಿವೇಶನ ರಹಿತರಿಗೆ ನಿವೇಶನ ಸಿಗುವುದು ಮರೀಚಿಕೆಯಾಗಿದೆ.
ಗ್ರಾಪಂಗೆ ಅರ್ಜಿ: 3ನೇ ಪಟ್ಟಿಯಲ್ಲಿ ಆಯ್ಕೆಯಾದ ಗ್ರಾಮದ ನಿರಾಶ್ರಿತಾರದ ನಾಲ್ಕು ಕುಟುಂಬಗಳು ಫಲಾನುಭಾವಿಗಳ ಪಟ್ಟಿ ಅನುಮೋದನೆಯಾಗಿ ಬರುವವರೆಗೆ ಬಡವಾಣೆಯ ನಿವೇಶನಗಳಲ್ಲಿ ತಾತ್ಕಾಲಿಕವಾಗಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತೇವೆ ನಂತರದಲ್ಲಿ ನೀವು ತೋರಿಸಿದ ಜಾಗದಲ್ಲಿ ಮನೆ ಕಟ್ಟಿಕೊಳ್ಳುತ್ತೇವೆ ಎಂದು ಗುಡಿಸಲನ್ನು ಹಾಕಿಕೊಂಡಿದ್ದಾರೆ.
ಆದರೆ ಕೆಲವು ಸ್ಥಳೀಯರು ಹೀಗೆ ಗುಡಿಸಲು ಹಾಕಿಕೊಂಡಿರುವ ಲಲಿತಾ ರಾಜು, ಸರಸ್ವತಿ ಪ್ರಕಾಶ್, ಸವಿತಾಮೋಹನ್, ಗೀತಾ ಸುಧಾಕರ್ ಎಂಬುವರ ಗುಡಿಸಲನ್ನು ಕೀಳಿಸುವಂತೆ ಗ್ರಾಪಂಗೆ ಅರ್ಜಿ ನೀಡಿದ್ದಾರೆ.
ಸರ್ಕಾರದಿಂದ ಅರ್ಹ ಫಲಾನುಭವಿಗಳಿಗೆ ನಿವೇಶನವನ್ನು ಗ್ರಾಪಂನವರು ಮಂಜೂರು ಮಾಡದೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮಂತವರ ಜೀವನದಲ್ಲಿ ಆಟವಾಡುತ್ತಿದ್ದಾರೆ ಎಂದು ಗುಡಿಸಲು ಹಾಕಿ ಕೊಂಡಿರುವ ನಿವೇಶನ ರಹಿತರು ಆರೋಪಿಸಿದ್ದಾರೆ.
ಅಸಹಾಯಕತೆ: ಈ ರೀತಿಯ ರಾಜಕೀಯ ಜಂಗಿ ಕುಸ್ತಿಯಿಂದ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡದೇ ಇರುವುದರಿಂದ ಆರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ನೀಡಿರುವ ಆಶ್ರಯ ಮನೆ ಹಂಚಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಪಂ ಅಧ್ಯಕ್ಷ ಅನುರಾಧ ದಿನೇಶ್ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ.