ವೈದ್ಯರ ನೇಮಿಸಲು ಆಗ್ರಹಿಸಿ ಪ್ರತಿಭಟನೆ
ಮೂಡಿಗೆರೆ: ಪಟ್ಟಣದ ಎಂಜಿಎಂ ಸ್ಮಾರಕ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದಲೂ ವೈದ್ಯರ ಕೊರತೆ ಎದುರಿಸುತ್ತಿದ್ದು, ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಬಡವರ ಗೋಳನ್ನು ಆಲಿಸುವವರೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಶಿಘ್ರವೇ ವೈದ್ಯರ ನೇಮಕ ಮಾಡುವಂತೆ ಒತ್ತಾಯಿಸಿ ಜು. 18 ರ ಗುರುವಾರದಂದು ಜೈಭೀಮ್ ಆಟೋ ಚಾಲಕ ಮತ್ತು ಮಾಲೀಕರು ಉಗ್ರ ಹೋರಾಟವನ್ನು ಹಮ್ಮಿಕೊಂಡಿರುವುದಾಗಿ ಸಂಘದ ಅಧ್ಯಕ್ಷ ಮಂಜಯ್ಯ ತಿಳಿಸಿದ್ದಾರೆ.
ನೌಕರರ ಕೊರತೆ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ಒಬ್ಬ ಮಹಿಳೆ ಮೃತ ಪಡಲು ವೈದ್ಯರ ಮತ್ತು ಡಿ. ಗ್ರೂಪ್ ನೌಕರರ ಕೊರತೆಯೇ ಕಾರಣ ಎಂದವರು ಹೇಳಿದರು.
ಮಲೆನಾಡು ಭಾಗವಾದ ಮೂಡಿಗೆರೆ ತಾಲೂಕಿನಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು, ಕೂಲಿಯನ್ನೇ ಅವಲಂಬಿಸಿಕೊಂಡಿದ್ದಾರೆ. 50 ಹಾಸಿಗೆ ಆಸ್ಪತ್ರೆಯಾಗಿದ್ದಾಗ ಇದ್ದ ವೈದ್ಯರು, 100 ಹಾಸಿಗೆಗೆ ಆಸ್ಪತ್ರೆ ಪರಿವರ್ತನೆಯಾದಾಗಲೂ ಅಷ್ಟೇ ಸಂಖ್ಯೆಯಲ್ಲಿ ಇರುವಂತಾಗಿದೆ ಎಂದರು.
100 ಹಾಸಿಗೆ ಆಸ್ಪತ್ರೆಗೆ ಕನಿಷ್ಠ 14 ವೈದ್ಯರಿರಬೇಕು. ಆದರೆ ಇಲ್ಲಿ ಇಬ್ಬರು ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 35 ಡಿ. ದರ್ಜೆ ನೌಕರರಲ್ಲಿ ಕೇವಲ 4 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಗಳು ಮೂಡಿಗೆರೆ ಆಸ್ಪತ್ರೆ ಬಗ್ಗೆ ಯಾವುದೇ ಗಮನಹರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ವಿರುದ್ಧ ಜು. 18 ರಂದು ಎಂಜಿಎಂ ಆಸ್ಪತ್ರೆಯ ಆವರಣದಲ್ಲೆ ಉಗ್ರ ರೀತಿಯ ಹೋರಾಟ ನಡೆಸಲು ಸಂಘದ ಸದಸ್ಯರು ತಿರ್ಮಾನಿಸಿದ್ದು, ಸಂಘ ಸಂಸ್ಥೆ, ಸಾರ್ವಜನಿಕರು ಪ್ರತಿಭಟನೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಉಪಾಧ್ಯಕ್ಷ ಸುಂದರ, ಬಿಎಸ್‌ಪಿ ರಮೇಶ್, ಯು.ಬಿ. ನಾಗೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.