22 ರಂದು ಸರ್ಕಾರಿ ನೌಕರರ ಸಂಘದ ಚುನಾವಣೆ
ನರಸಿಂಹರಾಜಪುರ: ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ 34 ನಿರ್ದೇಶಕರ ಚುನಾವಣೆಗಾಗಿ ನಾಮಪತ್ರ ಪರಿಶೀಲನೆ ಕಾರ್ಯ ಮುಕ್ತಾಯಗೊಂಡಿದ್ದು, ಅಂತಿಮವಾಗಿ 9 ನಿರ್ದೇಶಕರ ಸ್ಥಾನಗಳಿಗೆ 18 ಜನ ಚುನಾವಣಾ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಜಿ. ಮಾಳಮ್ಮನವರ್ ತಿಳಿಸಿದ್ದಾರೆ.
ಜು.22 ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜು. 15 ರಂದು ಕಡೆಯ ದಿನವಾಗಿತ್ತು. 34 ಸ್ಥಾನಗಳಿಗೆ 45 ನಾಮಪತ್ರ ಬಂದಿದ್ದವು. 16 ರಂದು 4 ನಾಮ ಪತ್ರ ವಾಪಾಸು ಪಡೆದಿದ್ದಾರೆ. 41 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ, 12 ವಿವಿಧ ಸರ್ಕಾರಿ ಇಲಾಖೆಯಿಂದ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ 23 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು. ಅಬಕಾರಿ ಇಲಾಖೆಯ 1 ಸ್ಥಾನಕ್ಕೂ ಯಾರೂ ನಾಮ ಪತ್ರ ಸಲ್ಲಿಸಿಲ್ಲ. ಸರ್ಕಾರಿ ಪ್ರಾಥಮಿಕ ಶಾಲೆಗಳ 6 ನಿರ್ದೇಶಕರ ಸ್ಥಾನಕ್ಕೆ 12 ಅಭ್ಯರ್ಥಿಗಳು ಹಾಗೂ ಸರ್ಕಾರಿ ಪ್ರೌಢಶಾಲೆಗಳ 3 ನಿರ್ದೇಶಕರ ಸ್ಥಾನಕ್ಕೆ 6 ಅಭ್ಯರ್ಥಿಗಳು ಮಾತ್ರ ಚುನಾವಣಾ ಕಣದಲ್ಲಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಗಳ 341 ಮತದಾರರು 6 ನಿರ್ದೇಶಕರನ್ನು ಹಾಗೂ ಸರ್ಕಾರಿ ಪ್ರೌಢಶಾಲೆಯ 76 ಮತದಾರರು 3 ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದೆ. ಜು. 22 ರಂದು ಗುರುಭವನದಲ್ಲಿ ಚುನಾವಣೆ ನಡೆಯಲಿದೆ ಎಂದ ಚುನಾವಣಾಧಿಕಾರಿ ಬಿ.ಜಿ. ಮಾಳಮ್ಮನರ್ ತಿಳಿಸಿದ್ದಾರೆ.