ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅತಿಕ್ರಮ ಮಳಿಗೆ ತೆರವಿಗೆ ಆಗ್ರಹ

Lingaraj Badiger
Updated On : 18 Jul 2013, 10:58 am

ಕಪ್ರ ವಾರ್ತೆ ಚಿಕ್ಕಮಗಳೂರು  ಜು.17
ವರ್ತಕರು ನಗರದ ಎಪಿಎಂಸಿಯಲ್ಲಿ ಅತಿಕ್ರಮಿಸಿರುವ ಮಳಿಗೆಗಳನ್ನು ತೆರವುಗೊಳಿಸಿ ರೈತರಿಗೆ ಬಿಟ್ಟುಕೊಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬುಧವಾರ ಎಪಿಎಂಸಿಯಲ್ಲಿ ಪ್ರತಿಭಟನೆ ನಡೆಸಿದರು.
ಎಪಿಎಂಸಿ ಅವ್ಯವಸ್ಥೆಯ ಆಗರವಾಗಿದೆ. ರೈತರು ತರಕಾರಿ ಇತರೆ ಉತ್ಪನ್ನಗಳನ್ನು ತಂದು ಮಾರಾಟ ಮಾಡಲು ಸರಿಯಾದ ವ್ಯವಸ್ಥೆ ಇಲ್ಲದೆ ತೊಂದರೆ ಪಡುತ್ತಿದ್ದಾರೆ.
 ಈಗ ಮಳೆಗಾಲ ವಾಗಿರುವುದರಿಂದ ರೈತರ ಉತ್ಪನ್ನಗಳನ್ನು  ಮಳೆಯಿಂದ ರಕ್ಷಿಸಲು ಸರಿಯಾದ ಗೋಡಾನ್‌ಗಳ ವ್ಯವಸ್ಥೆ ಇಲ್ಲ. ರೈತರು ಉತ್ಪನ್ನಗಳನ್ನು ರಸ್ತೆಯಲ್ಲಿ ಇಟ್ಟು ಮಾರಾಟ ಮಾಡುವಂತಾಗಿದೆ. ಮಳೆಯಲ್ಲಿ ನೆನೆದ ತರಕಾರಿಯನ್ನು ಕೇಳಿದ ಬೆಲೆಗೆ ಕೊಟ್ಟು ಬರುವ ಪರಿಸ್ಥಿತಿ ಎದುರಾಗಿದೆ ಎಂದು ರೈತ ಸಂಘದವರು ಹೇಳಿದ್ದಾರೆ.
ರೈತರ ಕಡಗಣನೆ: ರೈತರ ಉತ್ಪನ್ನಗಳ ಮಾರಾಟಕ್ಕಾಗಿ ಇರುವ ಕಟ್ಟೆಗಳನ್ನು ವ್ಯಾಪಾರಸ್ಥರು ಹಂಚಿಕೊಂಡು ಬೆಚ್ಚಗೆ ಕುಳಿತು ವ್ಯಾಪಾರ ಮಾಡಿದರೆ ಅನ್ನದಾತ ಬೀದಿಯಲ್ಲಿ, ಬಿಸಿಲಿನಲ್ಲಿ, ಮಳೆಯಲ್ಲಿ ನಿಂತು  ವ್ಯಾಪಾರ ವಹಿವಾಟು ನಡೆಸಬೇಕಾಗಿದೆ
. ರೈತರ ಉಪಯೋಗಕ್ಕಿರುವ ಕಟ್ಟೆಗಳನ್ನು ತೆರವುಗೊಳಿಸಲು ಅನೇಕ ಬಾರಿ ಒತ್ತಡ ತಂದರೂ ಎಪಿಎಂಸಿ ಆಡಳಿತ ಮಂಡಳಿ ವರ್ತಕರ ಒತ್ತಡಕ್ಕೆ ಮಣಿದು ರೈತರ ಅಹವಾಲನ್ನು ಕಡೆಗಣಿಸಿದೆ.
ಲೂಟಿ ಮಾಡಲಾಗುತ್ತಿದೆ: ಇಲ್ಲಿನ ಟೋಲ್ ಗೇಟ್‌ನಲ್ಲಿ ಸುಂಕ  ವಸೂಲಿಯನ್ನು ಮನಬಂದತೆ ಮಾಡಲಾಗುತ್ತದೆ. ಯಾರಿಗೂ ರಶೀದಿ ಕೊಡದೆ ಹಣವನ್ನು ಲೂಟಿ ಮಾಡಲಾಗುತ್ತಿದೆ. ಸರಿಯಾದ ಶೌಚಾಲಯದ ವ್ಯವಸ್ಥೆಯೂ ಇಲ್ಲದೇ ನೀರಿನ  ವ್ಯವಸ್ಥೆಯೂ ಇಲ್ಲದೇ ಸಾರ್ವಜನಿಕರು ಪರದಾಟುವಂತಾಗಿದೆ. ಎಪಿಎಂಸಿ ಅಧ್ಯಕ್ಷರು ಎಪಿಎಂಸಿ ಜೀಪನ್ನು ಸ್ವಂತ ವಾಹನದಂತೆ ಬಳಸಿಕೊಳ್ಳುತ್ತಿದ್ದಾರೆ. ತಾವೇ ಡ್ರೈವಿಂಗ್ ಮಾಡಿಕೊಂಡು ಊರಿಗೆ ಹೋಗಿ ಬರುವುದು ಮಾಡುತ್ತಿದ್ದಾರೆ. ಒಟ್ಟಾರೆ ರೈತರ ಹೆಸರಿನಲ್ಲಿ  ಹಣ ಖರ್ಚು ಮಾಡಿ ರೈತರನ್ನೇ ಕಡೆಗಣಿಸಿರುವ ಇವರಿಗೆ ರೈತರೇ ಬುದ್ಧಿ ಕಲಿಸಬೇಕಾಗಿದೆ. ಇನ್ನೊಂದು ವಾರದಲ್ಲಿ ರೈತರಿಗೆ ಮಾರಾಟಕ್ಕೆ  ಸರಿಯಾದ ವ್ಯವಸ್ಥೆ ಕಲ್ಪಿಸದಿದ್ದರೆ ಅನಿವಾರ್ಯವಾಗಿ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
 ಪ್ರತಿಭಟನೆಯಲ್ಲಿ ರೈತಸಂಘದ ತಾಲೂಕು ಕಾರ್ಯದರ್ಶಿ ಮಂಜುನಾಥ್, ಹಸಿರುಸೇನೆ ಜಿಲ್ಲಾಧ್ಯಕ್ಷ ಎಚ್.ಕೆ. ಶಶಿಧರ್, ಎಂ.ಎನ್. ರಮೇಶ್, ಕೆ.ಎಚ್. ಚಂದ್ರೇಗೌಡ , ಎಂ.ಸಿ. ಬಸವರಾಜ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement