ಆಂಗ್ಲ ಭಾಷೆ ಜಾಹೀರಾತು ಫಲಕ ತೆರವು
ಚಿಕ್ಕಮಗಳೂರು: ನಗರದ ಮುಖ್ಯ ರಸ್ತೆಗಳಲ್ಲಿ ಆಂಗ್ಲ ಭಾಷೆಗಳಲ್ಲಿದ್ದ ಜಾಹೀರಾತು ಫಲಕಗಳನ್ನು ಕನ್ನಡ ಸೇನೆ ಕಾರ್ಯಕರ್ತರು ಬುಧವಾರ ಕಿತ್ತು ಹಾಕಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ ನೇತೃತ್ವದಲ್ಲಿ ಮೆರವಣಿಗೆ ಹೊರಟ ಕಾರ್ಯಕರ್ತರು ಕೆ.ಎಂ. ರಸ್ತೆಯಲ್ಲಿರುವ ಎಂಇಎಸ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಆಂಗ್ಲ ಭಾಷೆಯಲ್ಲಿದ್ದ ಜಾಹೀರಾತು ಫಲಕಗಳನ್ನು ಕಿತ್ತು ಹಾಕಿ, ಕನ್ನಡ ವಿರೋಧಿ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು
ಕೆ.ಎಂ. ರಸ್ತೆ, ಎಂ.ಜಿ. ರಸ್ತೆಗಳಲ್ಲಿ ಕನ್ನಡ ವಿರೋಧಿಗಳ ವಿರುದ್ಧ ಘೋಷಣೆ ಹಾಕುತ್ತಾ ಕೆಲವು ಅಂಗಡಿಗಳಲ್ಲಿ ಹಾಕಲಾಗಿದ್ದ ಇಂಗ್ಲಿಷ್ ಫ್ಲೆಕ್ಸ್ ಬೋರ್ಡ್ಗಳನ್ನು ಹರಿದು ಹಾಕಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಪಿ.ಸಿ. ರಾಜೇಗೌಡ, ಕನ್ನಡನಾಡಿನಲ್ಲಿ ಹುಟ್ಟಿ, ಬೆಳೆದು, ಈ ನೆಲ ಜಲದಲ್ಲಿ ಜೀವಿಸುತ್ತಿರುವ ಜನರಿಗೆ ಕನ್ನಡದ ಬಗ್ಗೆ ತಾತ್ಸಾರ ಮನೋಭಾವ ಏಕೆ ಎಂದು ಕಿಡಿಕಾರಿದರು.
ಹಿಂದೆಯೆ ಹಲವು ಬಾರಿ ಅಂಗಡಿ ಮತ್ತು ಬ್ಯಾಂಕ್ಗಳಿಗೆ ಕನ್ನಡ ಭಾಷೆ ನಾಮಫಲಕ ಅಳವಡಿಸುವಂತೆ ಎಚ್ಚರಿಕೆ ನೀಡಿದ್ದೆವು, ಆದರೂ ನಮ್ಮ ತಾಳ್ಮೆ ಪರೀಕ್ಷಿಸುತ್ತಿದ್ದಾರೆ.
ಅಂಗಡಿಗಳಿಗೆ ಮುಂದಿನ 15 ದಿನಗಳ ಗಡುವು ನೀಡಿ ಯಾವುದೇ ಹಾನಿ ಮಾಡದಂತೆ ಕಾರ್ಯಕರ್ತರನ್ನು ತಡೆದಿದ್ದೇವೆ.
ಇದನ್ನರಿತು ಕನ್ನಡ ನಾಮಫಲಕಕ್ಕೆ ಪ್ರಾಧಾನ್ಯತೆ ನೀಡದಿದ್ದರೆ ಮುಂದಾಗುವ ಅನಾಹುತಕ್ಕೆ ಅಂಗಡಿಯವರೇ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಸಿದರು.
ಉಪಾಧ್ಯಕ್ಷ ಕೃಷ್ಣಪ್ಪ, ನಗರಾಧ್ಯಕ್ಷ ಪ್ರವೀಣ್, ದೇವರಾಜ್, ನಿಲೇಶ್, ರಂಜಿತ್, ಹೇಮಂತ್ ರಾಜು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.