ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಅಗತ್ಯ
ಚಿಕ್ಕಮಗಳೂರು: ವ್ಯಾಯಾಮ ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಹಿರಿಯ ಕ್ರೀಡಾಪಟು ಹಾಗೂ ಮುದ್ರಣಕಾರ ರಾಮದಾಸ್ ಪ್ರಭು ಹೇಳಿದ್ದಾರೆ.
ನಗರದ ಬ್ರಿಲಿಯಂಟ್ ಟ್ಯುಟೋರಿಯಲ್‌ನಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಮುದ್ರಣಕಾರರ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ವ್ಯಾಯಾಮ ಮತ್ತು ಕ್ರೀಡೆಯಿಂದ ಶರೀರವು ಸ್ಥಿರತೆಯಿಂದ ಕೂಡಿರುತ್ತದೆ. ಅಂಗಾಂಗಳು ತನ್ನ ದೈನಂದಿನ ಚಟುವಟಿಕೆಗಳನ್ನು ಸುಲಲಿತವಾಗಿ ನಡೆಸಿಕೊಂಡು ಹೋಗುತ್ತದೆ. ಮುದ್ರಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರ ಕುಟುಂಬದವರು ಕ್ರೀಡಾ ಕ್ಷೇತ್ರದಲ್ಲಿ ಮುಂದುವರೆಯಲು ಇಚ್ಛಿಸಿದರೆ ಸೂಕ್ತ ಮಾರ್ಗದರ್ಶನ ನೀಡುವುದಾಗಿ ರಾಮದಾಸ್ ಭರವಸೆ ನೀಡಿದರು.ಮುದ್ರಣಕಾರರ ಕ್ರಿಕೆಟ್ ತಂಡವನ್ನು ರಚಿಸಲು. ಎಸ್.ಎಚ್.ಜಿ. ಗುಂಪು ರಚಿಸಿಕೊಂಡು ಸದಸ್ಯರಿಗೆ ಹೆಚ್ಚಿನ ನೆರವು ನೀಡಲು ಸಭೆ ತೀರ್ಮಾನಿಸಿತು. ಜಿಲ್ಲಾಧ್ಯಕ್ಷ ಎಸ್. ನರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹಾಲಪ್ಪಶೆಟ್ಟಿ, ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್, ಸಲಹೆಗಾರರಾದ ಹರೀಶ್ ಮತ್ತು ಜಗದೀಶ್, ನಿರ್ದೇಶಕರಾದ ಸೋಮಸುಂದರ್, ಎಚ್.ಕೆ. ರಮೇಶ್ ಉಪಸ್ಥಿತರಿದ್ದರು.
ಸರ್ವಸದಸ್ಯರ ಸಭೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಂಪೂರ್ಣ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಏಕೈಕ ಶಾಲೆ ಮಹಿಳಾಶ್ರಮದ ಹಿರಿಯ ಪ್ರಾಥಮಿಕ ಶಾಲೆ ಎಂದು ಕಾರ್ಯದರ್ಶಿ ಅನಿತಾ ನಾಗೇಂದ್ರ ಹೇಳಿದರು.
ನಗರದ ಬಸವನಹಳ್ಳಿ ಮಹಿಳಾಶ್ರಮದ 2012-13ನೇ ಸಾಲಿನ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರಿಂದ ಪ್ರಾರಂಭಗೊಂಡ ಪೂರ್ವ ಪ್ರಾಥಮಿಕ, ಶಿಶುವಿಹಾರ ಹಾಗೂ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಸುಮಾರು 25 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಅತ್ಯಂತ ಕಡಿಮೆ ಶುಲ್ಕ ಪಡೆದು ಉತ್ತಮ ಶಿಕ್ಷಣ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದರು.
ಸುಸಜ್ಜಿತ ಕೊಠಡಿ: 8 ವಾಣಿಜ್ಯ ಮಳಿಗೆ ಹಾಗೂ 8 ಶಾಲಾ ಕೊಠಡಿಗಳನ್ನು ಮೊದಲ ಹಂತದಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ್ದು, ಈಗ 11 ಮಳಿಗೆ ಮತ್ತು ಮೇಲ್ಭಾಗದಲ್ಲಿ ಮತ್ತಷ್ಟು ಶಾಲಾ ಕೊಠಡಿ ನಿರ್ಮಾಣ ಪ್ರಗತಿಯಲ್ಲಿದೆ. ಶಾಲಾ ಆಟದ ಮೈದಾನದಲ್ಲಿ ಮಕ್ಕಳಿಗಾಗಿ ಜಾರು ಬಂಡಿ, ಜೋಕಾಲಿ ಅಳವಡಿಸುವ ಯೋಜನೆ ಇದೆ. ಪೀಠೋಪಕರಣ ದುರಸ್ತಿಗೊಳಿಸಲಾಗುತ್ತಿದೆ. ಮಹಿಳೆಯರಿಗಾಗಿ ಯೋಗ, ಆರೋಗ್ಯ ಹಾಗೂ ಕಸೂತಿ ತರಗತಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಖಜಾಂಚಿ ಜಯಶ್ರೀ ಪರಶುರಾಮ ಜೋಷಿ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕಿ ಸಂಧ್ಯಾ ಕಾಶಿಪ್ರಸಾದ್ ಹಾಗೂ ಡಾ. ಸುಧಾ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.