ಖಾತ್ರಿ ಅಕ್ರಮ: ತನಿಖೆಗೆ ಶಿಫಾರಸು
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.17
ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ತಾಲೂಕಿನ ಮಲ್ಲಂದೂರು, ಆವತಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಅಹವಾಲು ಆಲಿಸಿ ಮಾತನಾಡಿ, ಬ್ಯಾರವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ, ಕುಡಿಯುವ ನೀರು ಪೂರೈಕೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಗ್ರಾಮಸ್ಥರು ದೂರು ಹೇಳಿದರು.
ಇದಕ್ಕೆ ಉತ್ತರಿಸಿದ ಸಂಸದರು, ಹಿಂದೆಲ್ಲಾ ಕಾಮಗಾರಿಗಾಗಿ ಗುತ್ತಿಗೆದಾರರಿದ್ದರು. ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರಿಗಾಗಿ ಕಾಮಗಾರಿ ಸೃಷ್ಟಿ ಮಾಡಿದ್ದಾರೆ. ಈ ಕೂಗು ರಾಜ್ಯಾದ್ಯಂತ ಇದೆ ಎಂದರು.
ಕ್ರಮಕ್ಕೆ ಶಿಫಾರಸ್ಸು: ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿ ಇದಕ್ಕೆ ಇದರಲ್ಲಾಗಿರುವ ಅವ್ಯವಹಾರಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದೆಂದರು. ಈ ಯೋಜನೆಯಡಿ ಹಿಂದಿನ ತಪ್ಪುಗಳು ಮರುಕಳಿಸಲು ಅವಕಾಶ ನೀಡದ ಹಾಗೆ ಗುತ್ತಿಗೆದಾರರಿಗೆ ಹಣ ಪಾವತಿಸುವುದನ್ನು ಬಿಟ್ಟು ನೇರವಾಗಿ ಕೆಲಸ ಮಾಡಿದವರ ಖಾತೆಗೆ ಸಂಬಳ ಜಮಾ ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಸ್ಥಳೀಯವಾಗಿರುವ ವಿದ್ಯುತ್, ಕುಡಿಯುವ ನೀರು, ರಸ್ತೆ, ಚರಂಡಿ ಸಮಸ್ಯೆ, ಹೆಚ್ಚುವರಿ ಬಸ್ ಸಂಚಾರ, ಸಂತೆ ನಿರ್ಮಾಣ, ಬಿಪಿಎಲ್ ಕಾರ್ಡ್, ಪಡಿತರ ವಿತರಣೆ ಸಮಯ ಹೆಚ್ಚಿಸುವುದು ಸೇರಿದಂತೆ ವಿವಿಧ ಮೂಲ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಬಗೆಹರಿಸುವ ಭರವಸೆ ನೀಡಿದ ಅವರು, ವೈಯುಕ್ತಿಕ ಸೌಲಭ್ಯಗಳ ಸಮಸ್ಯೆ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದರು.
ಸ್ಕ್ಯಾನಿಂಗ್ ಸೆಂಟರ್: ಇಲ್ಲಿನ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು ಮತ್ತು ವೈದ್ಯರ ಕೊರತೆ ನೀಗಿಸಬೇಕು, ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬಾರದಿರುವುದರ ಬಗ್ಗೆ ಸಂಸದರ ಗಮನ ಸೆಳೆದಾಗ ಇದಕ್ಕೆ ಉತ್ತರಿಸಿದ ಅವರು, ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಗೆ ಸ್ಕ್ಯಾನಿಂಗ್ ಸೆಂಟರ್ ನೀಡುವುದಾಗಿ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ. ಗ್ರಾಮಾಂತರ ಪ್ರದೇಶದ ಆಸ್ಪತ್ರೆ ಮತ್ತು ಶಾಲೆಗಳಲ್ಲಿ ಕೆಲಸ ಮಾಡುವವರು ಸ್ಥಳೀಯವಾಗಿ ಜನರಿಗೆ ಸಹಕರಿಸಿಕೊಂಡು ಕಾರ್ಯನಿರ್ವಹಿಸದಿದ್ದರೆ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ನಿರ್ದಾಕ್ಷಿಣ್ಯ ಕ್ರಮಕೈಗೊಳುವುದಾಗಿ ಎಚ್ಚರಿಸಿದರು.
ಹೆಚ್ಚಿನ ಅನುಕೂಲ: ಕೆಪಿಸಿಸಿ ಕಾರ್ಯದರ್ಶಿ ಚಂದ್ರಪ್ಪ ಮಾತನಾಡಿ, ಚುನಾವಣೆಯಲ್ಲಿ ಪರಾಭವಗೊಂಡಿದ್ದೇವೆಂದು ಹಿಂದೆ ಸರಿಯುವ ಪ್ರಶ್ನೆಯಿಲ್ಲ, ಕಾಂಗ್ರೆಸ್ನಲ್ಲಿ ಸೋತವರು ಕುಗ್ಗಿಲ್ಲ, ಗೆದ್ದವರು ಹಿಗ್ಗಿಲ್ಲ, ರಾಜ್ಯದಲ್ಲಿ ಜನ ಕಾಂಗ್ರೆಸ್ಗೆ ಆಶೀರ್ವಾದಿಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ನಿರಾಕರಿಸಿದ್ದಾರೆ, ಫಲಿತಾಂಶದಲ್ಲಿ ಬದಲಾವಣೆ ಕಂಡಿದ್ದರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು ಎಂದರು.
ಶೋ ಪ್ರದರ್ಶಿಸುವ ರಾಜಕಾರಣಿಗಳನ್ನು ನಂಬಬೇಡಿ, ಎದುರಿನಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಹಿಂಬಾಗಿಲಿಂದ ಭ್ರಷ್ಟಾಚಾರ ಮಾಡುತ್ತಾರೆ. ನಾಟಕೀಯ ರಾಜಕಾರಣ ಬಿಡುವವರೆಗೂ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಜನ ನಿರಾಕರಿಸಿದ್ದು ಜನರ ದೌರ್ಭಾಗ್ಯ, ರಾಜಕೀಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಜನರು ಪ್ರಾಮಾಣಿಕರನ್ನು ಬೆಂಬಲಿಸಿ ಕೆಟ್ಟ ರಾಜಕಾರಣಿಗಳನ್ನು ಪಕ್ಷಾತೀತವಾಗಿ ವಿರೋಧಿಸಿ ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದಾಗ ರಾಜಕಾರಣ ಶುದ್ಧವಾಗಲು ಸಾಧ್ಯ. ಬಡ ವರ್ಗವನ್ನು ಮೇಲೆತ್ತಿ ಅವರ ಕಣ್ಣೊರೆಸುವುದು ಪ್ರಜಾಪ್ರಭುತ್ವದ ನೀತಿ. ಈ ಸಂಬಂಧ ಪ್ರಗತಿ ಪರ ಚಿಂತನೆಯುಳ್ಳ ರಾಹುಲ್ ಗಾಂಧಿ ಕೈ ಬಲಪಡಿಸಬೇಕಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಹಾಲಪ್ಪಗೌಡ, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್, ವಸಂತೇಗೌಡ, ಕೃಷ್ಣೇಗೌಡ, ರೂಪೇಶ್, ಶಶಿಧರ್, ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್, ಸತೀಶ್, ರತ್ನಾ ನಾಗೇಶ್, ಜಿಲ್ಲಾ ಕಾರ್ಯದರ್ಶಿ ನಾಗೇಶ್, ಅಮರನಾಥ್, ಮಂಜುನಾಥಾಚಾರ್ ಇದ್ದರು.
ಮೇಲ್ಸೆತುವೆ ಕಾಮಗಾರಿ ಪೂರ್ಣಗೊಳಿಸಿ
ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಸೀಗೋಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸುತ್ತಿರುವ ಮೇಲ್ಸೆತುವೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಅದನ್ನು ಕೂಡಲೇ ಪೂರ್ಣಗೊಳಿಸುವಂತೆ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಇಲಾಖೆಯ ಅಭಿಯಂತರರಿಗೆ ಸೂಚನೆ ನೀಡಿದ್ದಾರೆ.
ಇಲ್ಲಿನ ಜವಾಹರ್ ನವೋದಯ ವಿದ್ಯಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಕುರಿತು ಪೋಷಕರು ಸಂಸದರ ಗಮನಸೆಳೆದಾಗ ಕೂಡಲೇ ಸಂಬಂಧಪಟ್ಟ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು.
ವಿದ್ಯಾಲಯದಲ್ಲಿ ನಿರ್ಮಾಣವಾಗುತ್ತಿರುವ ಚಿಕಿತ್ಸಾಲಯಕ್ಕೆ ಸಂಸದರ ನಿಧಿಯಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಸಂಸದರ ಭೇಟಿ ಸಂದರ್ಭದಲ್ಲಿ ನವೋದಯ ವಿದ್ಯಾಲಯ ಸಮಿತಿ ಸದಸ್ಯೆ ಬಿ.ಸಿ. ಗೀತಾ, ಜಿ.ಪಂ. ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ, ನವೋದಯ ವಿದ್ಯಾಲಯದ ಪ್ರಾಚಾರ್ಯ ಕೆ. ರಾಮಿ ರೆಡ್ಡಿ ಉಪಸ್ಥಿತರಿದ್ದರು.
ಸಾರ್ವಜನಿಕರ ಆರೋಪಗಳೇನು?
ಉದ್ಯೋಗ ಖಾತ್ರಿ ಯೋಜನೆಯಡಿ, ಕುಡಿಯುವ ನೀರು ಪೂರೈಕೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ
ಆಸ್ಪತ್ರೆ ಮೇಲ್ದರ್ಜೆಗೇರಿಸುವುದು ಮತ್ತು ವೈದ್ಯರ ಕೊರತೆ ನೀಗಿಸಬೇಕು, ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬಾರದ ಶಿಕ್ಷಕರು
ಉದ್ಯೋಗ ಖಾತ್ರಿ ಯೋಜನೆಯಡಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ಅವ್ಯವಹಾರಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಶಿಫಾರಸು
ಹೆಚ್ಚುವರಿ ಬಸ್ ಸಂಚಾರ, ಸಂತೆ ನಿರ್ಮಾಣ, ಬಿಪಿಎಲ್ ಕಾರ್ಡ್, ಪಡಿತರ ವಿತರಣೆ ಸಮಸ್ಯೆ ಶೀಘ್ರದಲ್ಲಿ ಬಗೆಹರಿಸುವ ಭರವಸೆ