'ಮೆಸ್ಕಾಂ ಕಚೇರಿ ಸ್ಥಳಾಂತರ ಬೇಡ'
ಬೀರೂರು: ಪಟ್ಟಣದ ಮೆಸ್ಕಾಂ ಗ್ರಾಹಕ ಸೇವಾ ಕೇಂದ್ರವು ಪಟ್ಟಣದ ಸಂತೆ ಮೈದಾನದ ಸಮೀಪದ ಪುರಸಭಾ ಮಳಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ಸೇವಾ ಕೇಂದ್ರವನ್ನು ಮೆಸ್ಕಾಂ ಕಚೇರಿ ಅವರಣಕ್ಕೆ ಸ್ಥಳಾಂತರಿಸಿರುವುದಕ್ಕೆ ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಊರಿನ ಹೊರ ವಲಯದಲ್ಲಿರುವ ಕಚೇರಿಗೆ ಹೋಗಿ ದೂರು ನೀಡಿ ಬರಲು ವೃದ್ಧರು ಮಕ್ಕಳಿಂದ ಸಾಧ್ಯವೇ ಎಂದಿರುವ ಪಟ್ಟಣದ ಜನತೆ, ಊರಿನ ಮಧ್ಯ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಸಮಯಕ್ಕೆ ಸರಿಯಾಗಿ ದುರಸ್ತಿ ನಿರ್ವಹಿಸಲು ಕಷ್ಟವಾಗಿ ಗ್ರಾಹಕರಿಗೆ ಅನಾನುಕೂಲವಾಗಿತ್ತು. ಇದೀಗ ಇಷ್ಟೊಂದು ದೂರಕ್ಕೆ ಹೋಗಿ ವಿದ್ಯುತ್ ಇಲ್ಲದ ಬಗ್ಗೆ ದೂರು ದಾಖಲಿಸಿ ಬರಲು ಹೋಗಬೇಕೆಂದರೆ ಏನರ್ಥ ಎಂದು ಪ್ರಶ್ನಿಸಿರುವ ಮೆಸ್ಕಾಂ ಗ್ರಾಹಕರು, ಇಲಾಖೆ ಹಾಗೂ ಪುರಸಭೆಯು ಕೂಡಲೇ ಈಗಿರುವ ಜಾಗದಲ್ಲೇ ಕೇಂದ್ರವನ್ನು ಮುಂದುವರಿಸಲು ಮನವಿ ಮಾಡಿದ್ದಾರೆ.
ಭದ್ರಾ ನಾಲೆಗೆ ನೀರು
ಚಿಕ್ಕಮಗಳೂರು: ಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ಭದ್ರಾ ಬಲದಂಡೆ ನಾಲೆ, ಎಡದಂಡೆ ನಾಲೆ, ಆನವೇರಿ, ದಾವಣಗೆರೆ, ಮಲೆಬೆನ್ನೂರು ಹಾಗೂ ಹರಿಹರ ಶಾಖಾ ನಾಲೆಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಜು.10 ರಿಂದ ಆಗಸ್ಟ್ 30ರವರೆಗೆ, ಸೆ. 11 ರಿಂದ ಅ.31 ರವರೆಗೆ ನೀರು ಹರಿಸಲು ಭದ್ರಾ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯು ತೀರ್ಮಾನಿಸಿದೆ ಎಂದು ಸಮಿತಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.