ದರೋಡೆ ಪ್ರಕರಣ: ಆರೋಪಿಗಳು ನ್ಯಾಯಾಂಗ ವಶಕ್ಕೆ
ಶೃಂಗೇರಿ: ದರೋಡೆ ಯತ್ನ ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಗುರುವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಕೆಲ ದಿನಗಳ ಹಿಂದೆ ತಾಲೂಕಿನ ಧರೆಕೊಪ್ಪ ಪಂಚಾಯಿತಿ ಹೊಳೆಕೊಪ್ಪ ಸಮೀಪ ಹಳಕೆ ಎಂಬಲ್ಲಿ ನಾಗಭೂಷಣ ಎಂಬುವವರ ಒಂಟಿಮನೆಯಲ್ಲಿ ದರೋಡೆಗೆ ಯತ್ನಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹುಡುಕಾಟ ನಡೆಸುತ್ತಿದ್ದರು.
ಖಚಿತ ಮಾಹಿತಿ ಮೆರೆಗೆ ಬುಧವಾರ ಶೃಂಗೇರಿ ಪೊಲೀಸರು ಶ್ರೀರಂಗಪಟ್ಟಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಚೆಲುವರಾಜು ಹಾಗೂ ಧರಣಿ ಎಂಬಿಬ್ಬರು ಬಂಧಿತರಾಗಿದ್ದು, ಇನ್ನುಳಿದ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಕೆಲ ತಿಂಗಳುಗಳ ಹಿಂದೆ ನಾಗಭೂಷಣರವರ ಸಂಬಂಧಿಗಳು ಬಾಡಿಗೆ ವಾಹನವೊಂದರಲ್ಲಿ ಮೈಸೂರಿನಿಂದ ಹಳಕಕ್ಕೆ ಬಂದಿದ್ದರು. ಆರೋಪಿ ಚೆಲುವರಾಜು ಈ ವಾಹನದ ಚಾಲಕನಾಗಿದ್ದು, ಮನೆಯಲ್ಲಿ ವಯಸ್ಸಾದ ದಂಪತಿಗಳಿಬ್ಬರೆ ಇರುವುದನ್ನು ಗಮನಿಸಿ, ಕೆಲ ದಿನಗಳ ಹಿಂದೆ ನಾಲ್ಕೈದು ಜನರನ್ನು ಸೇರಿಸಿಕೊಂಡು ನಾಗಭೂಷಣರಾಯರ ಮನೆಗೆ ಬಂದು ದರೋಡೆ ಮಾಡಲು ಯತ್ನಿಸಿ ಪರಾರಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶೃಂಗೇರಿ ಸಿಪಿಐ ಎಸ್.ಎಸ್. ಹಿರೇಮಠ ನೇತೃತ್ವದಲ್ಲಿ ನಡೆದ ತನಿಖಾ ತಂಡದಲ್ಲಿ ಎಸೈ ರಾಜಶೇಖರ್, ಗುರುಮೂರ್ತಿ, ಪ್ರಸನ್ನ ಇದ್ದರು.
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ನರಸಿಂಹರಾಜಪುರ: ತಾಲೂಕಿನ ಬಿ.ಎಚ್. ಕೈಮರ ಸಮೀಪದ ನಾಗಲಾಪುರ ಜನತಾ ಕಾಲೋನಿಯ ಶೋಭಿ (33) ಎಂಬುವರು ಕ್ಷುಲ್ಲಕ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಶೋಭಿ ಅವರ ಪತ್ನಿ 1 ತಿಂಗಳ ಹಿಂದೆ ಮನೆ ಬಿಟ್ಟು ತವರು ಮನೆಗೆ ಹೋಗಿದ್ದಳು. ಕಳೆದ ಎರಡು ದಿನಗಳ ಹಿಂದೆ ಮನೆಗೆ ಬಂದಾಗ ಮಗು ಕರೆ ತರಲಿಲ್ಲ ಎಂಬ ವಿಷಯಕ್ಕೆ ಇಬ್ಬರ ನಡುವ ಜಗಳ ನಡೆದಿದೆ. ಪತ್ನಿ ತನ್ನ ಜೊತೆಯಲ್ಲಿ ವಾಸ ಮಾಡುತ್ತಿಲ್ಲ ಎಂಬ ಕೊರಗಿನಿಂದ ಬೇಸತ್ತು ಮಂಗಳವಾರ ಬೆಳಿಗ್ಗೆ ವಿಷ ಸೇವಿಸಿದ್ದಾನೆ.
ತಕ್ಷಣ ಅವರನ್ನು ನ.ರಾ.ಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೂ ಪ್ರಯೋಜನವಾಗದೆ ಮಂಗಳವಾರ ರಾತ್ರಿ ಶೋಭಿ ಮತಪಟ್ಟಿದ್ದಾನೆ. ಶೋಭಿಯ ತಂದೆ ಫೌಲೋಸ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಪಘಾತ: ಇಬ್ಬರಿಗೆ ಗಂಭೀರ ಗಾಯ
ಶೃಂಗೇರಿ: ತಾಲೂಕಿನ ಮೆಣಸೆ ಬಳಿ ಬೈಕ್ ಹಾಗೂ ಕಾರ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಗುರುವಾರ ಸಂಜೆಯವೇಳೆ ನಡೆದಿದೆ. ಇಲ್ಲಿನ ರಾಜೀವ ಗಾಂಧಿ ಸಂಸ್ಕೃತ ಕಾಲೇಜು ಎದುರಿನಲ್ಲಿ ಕಾರ್ ಬೈಕ್‌ಗೆ ಅಪ್ಪಳಿಸಿದಾಗ ಬೈಕ್ ರಸ್ತೆಗುರುಳಿದ ಪರಿಣಾಮ ಬೈಕ್ ಸವಾರ ಮಂಜುನಾಥ್ ಹೆಗ್ಡೆ (26), ಸಹಸವಾರ ವಿಜಯ್ ಗಂಭೀರವಾಗಿ ಗಾಯಗೊಂಡರು. ಗಾಯಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ.