ನೈಸರ್ಗಿಕ ಸಂಪತ್ತು ಸಂರಕ್ಷಿಸುವಲ್ಲಿ ವಿಫಲ
ಚಿಕ್ಕಮಗಳೂರು: ನೈಸರ್ಗಿಕ ಹಾಗೂ ಪ್ರಕೃತಿದತ್ತವಾದ ಸಂಪತ್ತನ್ನು ಶಕ್ತಿಯಾಗಿ ಬಳಸಿಕೊಳ್ಳುವಲ್ಲಿ ನಾವುಗಳು ವಿಫಲರಾಗಿದ್ದೇವೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಎನ್. ಮಹೇಶ್ ಹೇಳಿದ್ದಾರೆ.
ಜಿಲ್ಲಾ ಸ್ಕೌಟ್ ಭವನದಲ್ಲಿ 21ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಅಂಗವಾಗಿ ವಿಜ್ಞಾನ ಶಿಕ್ಷಕರಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಸಂಪ್ರದಾಯಿಕ ಇಂಧನ ಬಳಸುವುದರಿಂದ ನಾವುಗಳು ಮುಂದಿನ ಪೀಳಿಗೆಗೆ ವಿಶೇಷ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಮಕ್ಕಳ ಭವಿಷ್ಯದ ಬದುಕನ್ನು ಕಟ್ಟಿಕೊಡುವ ಕಾರ್ಯಕ್ಕೆ ವಿಜ್ಞಾನ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರಾದ ನಾವುಗಳು ಜ್ಞಾನವನ್ನು ತುಂಬುದರ ಜೊತೆಗೆ ವಿಜ್ಞಾನವನ್ನು ಆಳವಾಗಿ ತುಂಬುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಇದು ಮಗುವಿನಿಂದ ಮತ್ತೊಂದು ಮಗುವಿಗೆ ಹರಡಿ ಮುಂದಿನ ಮನ ಕುಲಕ್ಕೆ ದಾರಿದೀಪವಾಗಬೇಕೆಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ವಿಜ್ಞಾನ ಕೇಂದ್ರದ ಮಹಾ ಪೋಷಕ ಎಂ.ಎನ್. ಷಡಕ್ಷರಿ, ಯಾವುದೇ ಅವಿಷ್ಕಾರ ಮೇಲ್ನೋಟಕ್ಕೆ ಚಿಕ್ಕದಾಗಿ ಕಂಡರೂ ಕೂಡ ಅದರ ಹಿಂದಿನ ಪರಿಶ್ರಮ ಮತ್ತು ಚಿಂತನೆ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಇಂದಿನ ಮಕ್ಕಳಲ್ಲಿ ಆಗಾಧವಾದ ಪ್ರಶ್ನೆಗಳು ಉದ್ಭವವಾಗುತ್ತಿದ್ದು, ಶಿಕ್ಷಕರಾದ ನಾವುಗಳು ವಿಷಯದಲ್ಲಿ ಸಂಪೂರ್ಣವಾದ ಪರಿಪೂರ್ಣತೆಯನ್ನು ಹೊಂದುವ ಅಗತ್ಯವಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಿವಾಸ್, ವಿಜ್ಞಾನ ಕೇಂದ್ರದ ಪದಾಧಿಕಾರಿಗಳಾದ ಸತ್ಯನಾರಾಯಣ, ಲೋಕೇಶ್, ನೀಲಕಂಠಪ್ಪ, ಪ್ರಕಾಶ್ ವೇದಿಕೆಯಲ್ಲಿದ್ದರು. ಕೆ.ಜಿ. ನೀಲಕಂಠಪ್ಪ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹಲವರು ಇದ್ದರು.