ಬಸ್ ನಿಲುಗಡೆಗೆ ಆಗ್ರಹಿಸಿ ರಸ್ತೆ ತಡೆ
ಚಿಕ್ಕಮಗಳೂರು: ವೇಗದೂತ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗೆ ಆಗ್ರಹಿಸಿ ತಾಲೂಕಿನ ಮುಗುಳವಳ್ಳಿ ರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ರೈತ ಸಂಘದ ಆಶ್ರಯದಲ್ಲಿ ಗುರುವಾರ ರಸ್ತೆ ತಡೆ ಚಳವಳಿ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಎಚ್.ಕೆ. ಶಶಿಧರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಚಿಕ್ಕಮಗಳೂರು- ಬೇಲೂರು ಮಾರ್ಗದಲ್ಲಿರುವ ಮುಗುಳವಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ವೇಗದೂತ ಬಸ್‌ಗಳ ಕೋರಿಕೆ ನಿಲುಗಡೆಗೆ ಸಾರಿಗೆ ಸಂಸ್ಥೆ ನಿರ್ದೇಶನ ನೀಡಿದೆ. ಆದರೆ, ಬಸ್ ಚಾಲಕರು ಮತ್ತು ನಿರ್ವಾಹಕರು ಬಸ್‌ಗಳ ನಿಲುಗಡೆಗೆ ನಿರಾಕರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಉಡಾಫೆ ಉತ್ತರ ನೀಡುತ್ತಿದ್ದಾರೆಂದು ಆರೋಪಿಸಿ ರಸ್ತೆ ತಡೆ ನಡೆಸಲಾಯಿತು.
ಆಗ ಸ್ಥಳಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವೇಗದೂತ ಬಸ್‌ಗಳ ನಿಲುಗಡೆ ಸೇರಿದಂತೆ ಚಿಕ್ಕಮಗಳೂರು- ಬೇಲೂರು ಮಾರ್ಗಕ್ಕೆ ಹೊಸದಾಗಿ ನಾಲ್ಕು ಬಸ್‌ಗಳನ್ನು ಬಿಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ರಮೇಶ್, ಮಂಜುನಾಥ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ನಿರಂಜನ್, ಬಸವರಾಜ್, ಪರಮೇಶ್ವರಪ್ಪ, ವಿದ್ಯಾರ್ಥಿಗಳಾದ ಎಂ.ವಿ. ದರ್ಶನ್, ಸಂದೀಪ್, ದಿಲೀಪ್, ನವೀನ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
--
ಅವಧಿ ವಿಸ್ತರಣೆ
ಚಿಕ್ಕಮಗಳೂರು: ಕುವೆಂಪು ವಿಶ್ವವಿದ್ಯಾನಿಲಯದ 2013-14ನೇ ಶೈಕ್ಷಣಿಕ ಸಾಲಿಗೆ ವಿವಿಧ ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಲು ಹಾಗೂ ಪ್ರವೇಶ ಪರೀಕ್ಷೆಗೆ ನಿಗಧಿಪಡಿಸಿದ ಕೊನೆಯ ದಿನ ಜು.19ರವರೆಗೆ ಸ್ನಾತಕೋತ್ತರ ಸಮಾಜ ಕಾರ್ಯ, ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನಕ್ಕೆ ಜು.20 ರವರೆಗೆ ಎಂಪಿಇಡಿ ಪದವಿ ಪರೀಕ್ಷೆಗೆ ಜು.21ರವರೆಗೆ ವಿಸ್ತರಿಸಲಾಗಿದೆ.