ಮಳೆ ಹಾನಿ: 13.66 ಕೋಟಿ ಬಿಡುಗಡೆ
ಚಿಕ್ಕಮಗಳೂರು: ರಾಜ್ಯದಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ 7 ಜಿಲ್ಲೆಗಳಿಗೆ 13.66 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಇದರಲ್ಲಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಜತೆಗೆ ಬಳ್ಳಾರಿ ಜಿಲ್ಲೆಗೂ ಅನುದಾನ ನೀಡಲಾಗಿದೆ.
2013-14ನೇ ಸಾಲಿಗೆ ಎಸ್ಡಿಆರ್ಎಸ್ ಅಡಿಯಲ್ಲಿ ಮೊದಲ ಕಂತಿನಲ್ಲಿ ಕಳೆದ ಜೂನ್ 15 ರಂದು ನೆರೆ ಹಾವಳಿಯಿಂದ ಹಾನಿಯಾಗುವ ಜಿಲ್ಲೆಗಳಿಗೆ 6.16 ಕೋಟಿ ಬಿಡುಗಡೆ ಮಾಡಿದೆ. ಹಾನಿಗೊಳಗಾಗುವ ಆಸ್ತಿ ಮತ್ತು ಜನ ಜಾನುವಾರುಗಳ ರಕ್ಷಣೆಗಾಗಿ 5 ತಾಲೂಕುಗಳಿಗಿಂತ ಕಡಿಮೆ ಹೊಂದಿರುವ 15 ಜಿಲ್ಲೆಗಳಿಗೆ ತಲಾ 10 ಲಕ್ಷ, 5 ತಾಲೂಕುಗಳಿಗಿಂತ ಮೇಲ್ಪಟ್ಟ ಜಿಲ್ಲೆಗಳಿಗೆ ಅಂದರೆ 15 ಜಿಲ್ಲೆಗಳಿಗೆ ತಲಾ 20 ಲಕ್ಷ ಬಿಡುಗಡೆಯಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ 150 ಲಕ್ಷ, ಬಳ್ಳಾರಿ ಜಿಲ್ಲೆಗೆ ನೆರೆ ಪರಿಹಾರಕ್ಕಾಗಿ 16 ಲಕ್ಷ ಅನುದಾನ ಬಿಡುಗಡೆಯಾಗಿದೆ.
7.50 ಕೋಟಿ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಹೆಚ್ಚು ಹಾನಿ ಸಂಭವಿಸಿರುವ ರಾಜ್ಯದ ಕರಾವಳಿ ಮತ್ತು ಮಲೆನಾಡಿನ 6 ತಾಲೂಕುಗಳಿಗೆ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಜು.15 ರಂದು 7.50 ಕೋಟಿ ಬಿಡುಗಡೆಯಾಗಿದೆ.
ಇದರಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ತಲಾ 1.50 ಕೋಟಿ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಗೆ ತಲಾ 1ಕೋಟಿ ಬಿಡುಗಡೆಯಾಗಿದೆ.
ಹಣವನ್ನು ಮಾನವ, ಪ್ರಾಣಿ ಜೀವಹಾನಿಗೆ ಹಾಗೂ ಮೂಲಭೂತ ಸೌಕರ್ಯಗಳ ತುರ್ತು ರಿಪೇರಿಗೆ ಬಳಸಿಕೊಳ್ಳುವಂತೆ ರಾಜ್ಯ ಸರ್ಕಾರ ಆದೇಶದಲ್ಲಿ ಸೂಚನೆ ನೀಡಿದೆ. ಅನುದಾನ ಲಭ್ಯತೆ ಇಲ್ಲದೇ ಯಾವುದೇ ದುರಸ್ಥಿ ಕಾಮಗಾರಿಗಳನ್ನು ಎಸ್ಡಿಆರ್ಎಫ್, ಎನ್ಡಿಆರ್ಎಫ್ ಅಡಿಯಲ್ಲಿ ತೆಗೆದುಕೊಳ್ಳಬಾರದು.
ಕಾಮಗಾರಿಗಳನ್ನು ಬಿಡುಗಡೆಯಾದ ಅನುದಾನಕ್ಕೆ ಮಾತ್ರ ಸೀಮಿತಗೊಳಿಸಬೇಕೆಂದು ಹೇಳಲಾಗಿದೆ. ಪ್ರಕೃತಿ ವಿಕೋಪದಿಂದ ಆದಂತಹ ವಿಪತ್ತು ಹಾನಿಗೆ ಮಾತ್ರ ಪರಿಹಾರ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.