ವ್ಯಕ್ತಿತ್ವ ವಿಕಸನಕ್ಕೆ ಆಸಕ್ತಿ ಅಗತ್ಯ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.18
ಜ್ಞಾನಕ್ಕಿಂತ ದೊಡ್ಡ ಶ್ರೀಮಂತಿಕೆ ಮತ್ತೊಂದಿಲ್ಲ. ವಿದ್ಯಾರ್ಥಿಗಳು ನೈತಿಕ ಶಿಕ್ಷಣ ಬೆಳೆಸಿಕೊಂಡು ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುವ ವ್ಯಕ್ತಿತ್ವ ಬೆಳೆಸಿಕೊಂಡಾಗ ಭಾರತದ ಸತ್ಪ್ರಜೆಯಾಗಲು ಸಹಕಾರಿಯಾಗುತ್ತದೆ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಗುರುವಾರ ನಡೆದ ಶ್ರೀಮತಿ ಸುಂದರಮ್ಮ ಶಂಕರಮೂರ್ತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಪಠ್ಯ- ಪಠ್ಯೇತರ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಮಾಣಿಕತೆ ಬೆಳೆಸಿಕೊಳ್ಳಿ: ವಿದ್ಯಾಭ್ಯಾಸ ಮತ್ತು ಅಕ್ಷರ ಜ್ಞಾನಕ್ಕೂ ಅಂತರವಿದೆ. ಹಿರಿಯರಿಗಿದ್ದ ಜ್ಞಾನ ಭಂಡಾರ ಇಂದಿನ ಯುವ ಪೀಳಿಗೆಯಲಿಲ್ಲ. ವ್ಯಕ್ತಿತ್ವ ವಿಕಸನದ ಬಗ್ಗೆ ಕಾಳಜಿವಹಿಸುವುದು ಮುಖ್ಯ ಎಂದ ಅವರು, ಮನುಷ್ಯನ ಬದಲಾವಣೆ ಬರಿ ಕಾನೂನಿನಿಂದ ಅಸಾಧ್ಯ. ನೈತಿಕ ಶಿಕ್ಷಣದ ಜೊತೆ ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು ಎಂದರು.
ಇದು, ಸ್ಪರ್ಧಾತ್ಮಕ ಯುಗ. ಕೇವಲ ಅಕ್ಷರ ಜ್ಞಾನದಲ್ಲಿ ಮಾತ್ರ ತಲ್ಲೀನರಾಗದೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ತಮ್ಮೊಳಗಿರುವ ಆಸಕ್ತಿಗೆ ಒತ್ತು ಕೊಟ್ಟಾಗ ಸಾಮಾನ್ಯ ಜ್ಞಾನ ವೃದ್ಧಿಸಿ ಸೃಜನ ಶೀಲತೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾ ಸಂಸ್ಥೆಗಳು ಗಟ್ಟಿಯಾಗಲು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿನ ಹೊಂದಾಣಿಕೆ ಮುಖ್ಯ. ಯಶಸ್ಸು ಕಾಣುವುದೆ ಕಷ್ಟ ಅದನ್ನು ಮುಂದುವರೆಸಿಕೊಂಡು ಹೋಗುವುದು ಮತ್ತಷ್ಟು ಕಷ್ಟ. ಈ ನಿಟ್ಟಿನಲ್ಲಿ ಹಿರಿಯರು ಕಟ್ಟಿ ಬೆಳೆಸಿದ ಎಂಇಎಸ್ ಸಂಸ್ಥೆಯನ್ನು ಇಂದಿನ ಆಡಳಿತ ಮಂಡಳಿ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸುತ್ತಿದೆ ಎಂದು
ಲಿಡ್ಕರ್ ಸಂಸ್ಥೆ ಮಾಜಿ ಅಧ್ಯಕ್ಷ ಬಿ.ಎನ್. ಚಂದ್ರಪ್ಪ ಮಾತನಾಡಿ, ಹಸಿದವನಿಗೆ ಅನ್ನ ಹಾಕಿ ಬಾಯಾರಿಕೆ ನೀಗಿಸಿ ವಿದ್ಯಾದಾನ ಮಾಡಿದಾಗ ಸಿಗುವ ಸಂತೃಪ್ತಿ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತದೆ ಎಂದು ಹೇಳಿದರು.
ಮಧ್ಯಮ ವರ್ಗಕ್ಕೆ ಸಹಕಾರಿ: ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಡಿ.ಎಲ್. ವಿಜಯಕುಮಾರ್ ಮಾತನಾಡಿ, ಹಿರಿಯರ 5 ದಶಕಗಳ ಶ್ರಮದಿಂದ ಇಂದು 3500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಪುಣ್ಯದ ಕೆಲಸ ನಡೆಯುತ್ತಿದೆ. ಶಿಸ್ತಿಗೆ ಮತ್ತು ಗುಣಮಟ್ಟಕ್ಕೆ ಹೆಸರಾದ ಈ ಸಂಸ್ಥೆ ಬಡವರು ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಸಹಕಾರಿಯಾಗಿದೆ ಎಂದರು.
ನಗರದ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಶಾಲೆಯ ಕೊಠಡಿಗಳು ತೆರವಾಗಿದೆ. 4.5 ಕೋಟಿ ವೆಚ್ಚದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಸಂಸದರ ನಿಧಿಯಿಂದ ಅನುದಾನ ನೀಡುವಂತೆ ಮನವಿ ಮಾಡಿದರು.
ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಕರಿಗೆ ಯುಜಿಸಿ ವೇತನ ನೀಡಲು ಸಾಧ್ಯವಾಗುತ್ತಿಲ್ಲ, ಆದರೂ ಶಿಕ್ಷಣದಲ್ಲಿ ಕೊರತೆ ಬಿದ್ದಿಲ್ಲ, ಅನುದಾನಿತ ಕಾಲೇಜಿಗೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಅದಕ್ಕೆ ಸಂಸದರು ಸಹಕರಿಸಿದರೆ ಅನುಕೂಲವಾಗುತ್ತದೆ ಎಂದರು.
ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಮತ್ತು ಅವರ ಪೋಷಕರಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಪ್ರಾಚಾರ್ಯರಾದ ಜಿ.ಪಿ. ಪುಷ್ಪಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಅನಂತರಾಮಯ್ಯ, ಸಹ ಕಾರ್ಯದರ್ಶಿ ಎಸ್. ಶ್ರೀಧರ್, ನಿರ್ದೇಶಕ ಎಂ. ಶಂಕರಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್. ಮಹೇಶ್, ಸೋಮೇಗೌಡ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ನುಸೈಬಾ, ಕಾರ್ಯದರ್ಶಿ ಹರ್ಷಿತ ವಿ. ಶರ್ಮ, ಸಾಂಸ್ಕೃತಿಕ ಕಾರ್ಯದರ್ಶಿ ವರ್ಷ, ಧನುಷ್ ವೇದಿಕೆಯಲ್ಲಿದ್ದರು. ಉಪನ್ಯಾಸಕರಾದ ಅನಂತಲಕ್ಷ್ಮಿ ಸ್ವಾಗತಿಸಿದರು, ಸುಭಾಷ್ ಕಾರ್ಯಕ್ರಮ ನಿರೂಪಿಸಿದರು.