ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಭಿವೃದ್ಧಿ ಕಾಮಗಾರಿ; ಜನರಿಗೆ ಕಿರಿ ಕಿರಿ

Lingaraj Badiger
Updated On : 20 Jul 2013, 11:08 am

ಕಪ್ರ ವಾರ್ತೆ, ಚಿಕ್ಕಮಗಳೂರು, ಜು.19
ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯಿಂದಾಗಿ ಜನರು ಕಿರಿ ಕಿರಿ ಅನುಭವಿಸುವಂತಾಗಿದೆ. ಒಳ ಚರಂಡಿ ನಿರ್ಮಾಣದ ಕಾಮಗಾರಿ ಬೇಕಾಬಿಟ್ಟಿ ನಡೆದಿದ್ದರಿಂದ ಜನರು ಇಂದು  ತೊಂದರೆ ಅನುಭವಿಸುತ್ತಿದ್ದಾರೆ. ಆಗುತ್ತಿರುವ  ಸಮಸ್ಯೆಗಳ ಬಗ್ಗೆ ಹೇಳುವವರು ನೂರಾರು ಮಂದಿ ಇದ್ದಾರೆ. ಆದರೆ, ಅದನ್ನು ಕೇಳಿದರೂ ಪರಿಹಾರ ಕಂಡುಕೊಳ್ಳುವರರು ಯಾರೂ ಇಲ್ಲದಂತಾಗಿದೆ.
 ವ್ಯವಸ್ಥಿತವಾಗಿ ಒಳ ಚರಂಡಿ ಕಾಮಗಾರಿ ನಡೆಸಿದ್ದರೆ, ಇಂದು ಜನರು ಕೆಸರಿನಲ್ಲಿ ಓಡಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಅಧಿಕಾರಿಗಳು ಕಾಮಗಾರಿಯ ಪ್ರಗತಿ ನೋಡಿದರೆ ಹೊರತು, ಇದರಿಂದ ಮುಂದಾಗಬಹುದಾದ ತೊಂದರೆಯ ಬಗ್ಗೆ ಗಮನ ಹರಿಸಿಲ್ಲ ಎಂಬುದು ಈಗಿನ ಪರಿಸ್ಥಿತಿ ನೋಡಿದರೆ ತಿಳಿಯುತ್ತದೆ.
ಎರಡು ಹಂತಗಳಲ್ಲಿ: ಚಿಕ್ಕಮಗಳೂರು ನಗರದ ಶೇ. 80 ರಷ್ಟು ಪ್ರದೇಶಗಳಲ್ಲಿ ಒಳ ಚರಂಡಿ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡು ಹಿಂದಿನ ಬಿಜೆಪಿ ಸರ್ಕಾರ ಒಳ ಚರಂಡಿ ನಿರ್ಮಾಣಕ್ಕಾಗಿ 57 ಕೋಟಿ ರು. ಬಿಡುಗಡೆ ಮಾಡಿತ್ತು. ಈ ಕಾಮಗಾರಿಯ ಗುತ್ತಿಗೆಯನ್ನು ಎರಡು ಹಂತಗಳಲ್ಲಿ ಇಬ್ಬರು ಟೆಂಡರ್‌ದಾರರಿಗೆ ವಹಿಸಲಾಗಿತ್ತು.
ಯೋಜನಾಬದ್ಧತೆ ಇಲ್ಲ: ಗುತ್ತಿಗೆದಾರರು, ತಮಗೆ ಅನುಕೂಲವಾಗುವ ರೀತಿಯಲ್ಲಿ ಅಂದರೆ ಕೂಲಿ ಕಾರ್ಮಿಕರು ಬಂದರೆ ಕೆಲಸ ಅವರು ರಜೆ ಮಾಡಿದರೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಕೈ ಬಿಡುತ್ತಾ ಬಂದಿದ್ದಾರೆ. ಯಾವ ಬಡಾವಣೆಯಲ್ಲೂ ಯೋಜನಾಬದ್ಧವಾಗಿ ಕಾಮಗಾರಿಯನ್ನು ಮಾಡಿರುವುದಿಲ್ಲ. ಮ್ಯಾನ್ ಹೋಲ್‌ಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿ, ಇಡೀ ನಗರ ತುಂಬಾ ಮ್ಯಾನ್‌ಹೋಲ್‌ಗಳನ್ನು ನಿರ್ಮಾಣ ಮಾಡಿ ಕೈ ತೊಳೆದುಕೊಂಡಿದ್ದಾರೆ.
ಅವೈಜ್ಞಾನಿಕ: ಮ್ಯಾನ್‌ಹೋಲ್‌ಗಳಿಗೆ ಹಾಕಿರುವ ಇಟ್ಟಿಗೆಗಳು ಗುಣಮಟ್ಟದಲ್ಲ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಇದರಿಂದಾಗಿ ಹಲವೆಡೆ ಮ್ಯಾನ್ ಹೋಲ್‌ಗಳು ಹಾಳಾಗಿವೆ. ಒಂದು ಮ್ಯಾನ್ ಹೋಲ್‌ನಿಂದ ಮತ್ತೊಂದು ಮ್ಯಾನ್‌ಹೋಲ್‌ಗೆ ಸಂಪರ್ಕ ಕಲ್ಪಿಸಲು ಪೈಪ್‌ಗಳ ಜೋಡಣಾ ನಡೆದಿದೆ. ಆದರೆ, ಸರ್ವೀಸ್ ಚೇಂಬರ್ ನಿರ್ಮಾಣ ಮಾಡಿಲ್ಲ. ಸರ್ವೀಸ್ ಚೇಂಬರ್ ನಿರ್ಮಾಣ ಮಾಡಲು ಮತ್ತೆ ಚರಂಡಿಯನ್ನು ತೋಡಬೇಕಾಗಿದೆ.
ಓಡಾಟಕ್ಕೆ ತೊಂದರೆ: ಒಳ ಚರಂಡಿ ನಿರ್ಮಾಣದ ಗುತ್ತಿಗೆ ನೀಡುವಾಗ ಹಾಲಿ ಇರುವ ಯಥಾಸ್ಥಿತಿಯಲ್ಲಿ ರಸ್ತೆಯನ್ನು ಬಿಟ್ಟು ಕೊಡಬೇಕೆಂಬ ಷರತ್ತು ವಿಧಿಸಲಾಗಿದೆ. ಆದರೆ, ಮ್ಯಾನ್‌ಹೋಲ್ ಮತ್ತು ಪೈಪ್ ಜೋಡಣೆ ಮಾಡಲು ತೆಗೆದ ಗುಂಡಿಗಳು ಬೇಕಾಬಿಟ್ಟಿ ಮುಚ್ಚಲಾಗಿದೆ. ಹಲವೆಡೆ ಮಣ್ಣನ್ನು ಅಲ್ಲಲ್ಲೇ ಬಿಟ್ಟಿದ್ದರಿಂದ ಮಳೆಗಾಲದಲ್ಲಿ ಅದು ಕೆಸರಾಗಿದೆ. ಇದರಿಂದಾಗಿ ಸಾರ್ವಜನಿಕ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ.
 ಪೈಪ್‌ಗಳ ಜೋಡಣೆಗೆ ತೆಗೆದಿರುವ ಚರಂಡಿಯ ಮೇಲೆ ರೆಸ್ಟೋರೇಷನ್ ಮಾಡಬೇಕೆಂದು ಟೆಂಡರ್‌ನ ಷರತ್ತಿನಲ್ಲಿ ಹೇಳಲಾಗಿದೆ. ಆದರೆ, ಆ ಕೆಲಸ ಸಮರ್ಪಕವಾಗಿ ಆಗಿಲ್ಲ. ಈ ಸಂಬಂಧ ನಗರಸಭಾ ಹಲವು ಬಾರಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಯಾವ ಅಧಿಕಾರಿಯೂ ಸ್ಪಂದಿಸಿಲ್ಲ. ಕೆಲವೆಡೆ ಮಾಡಿರುವ ರೆಸ್ಟೋರೇಷನ್ ಸರಿಯಾಗಿಲ್ಲ ಎಂಬುದಕ್ಕೆ ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಕುಸಿದಿರುವ ರಸ್ತೆಯೇ ಸಾಕ್ಷಿ.
 57 ಕೋಟಿ ರುಪಾಯಿ ಕಾಮಗಾರಿಯನ್ನು ಮನಬಂದಂತೆ ಗುತ್ತಿಗೆದಾರರು ಮಾಡಿದ್ದಾರೆ. ಅವರು ಮಾಡಿರುವ ಬೇಕಾಬಿಟ್ಟಿ ಕೆಲಸಕ್ಕೆ ಕಡಿವಾಣ ಹಾಕಬೇಕಾಗಿದ್ದ ಅಧಿಕಾರಿಗಳು ಕಣ್ಣು ಮುಚ್ಚಿಕುಳಿತುಕೊಂಡಿದ್ದರ ಫಲವಾಗಿ ಇಂದು ನಗರದ ಜನತೆ ಹದಗೆಟ್ಟ ರಸ್ತೆಯಲ್ಲಿಯೇ ಓಡಾಡಬೇಕಾಗಿದೆ.
ಕಸ ಸಂಗ್ರಹ: ಕೆಸರಿನ ರಸ್ತೆಗಳು ಜನರ ಓಡಾಟಕ್ಕೆ ಮಾತ್ರವಲ್ಲ. ಮನೆ  ಮನೆ ಕಸ ಸಂಗ್ರಹಕ್ಕೂ ತೊಂದರೆ ನೀಡಿವೆ.
 ನಗರದ ಕೆಂಪನಹಳ್ಳಿ, ರಾಮನಹಳ್ಳಿ, ಗೌರಿ ಕಾಲುವೆ, ಕಲ್ಲುದೊಡ್ಡಿ, ಕಲ್ಯಾಣನಗರದ ಆಶ್ರಯ ಬಡಾವಣೆ, ಜಯನಗರ, ಹಿರೇಮಗಳೂರು ಸೇರಿದಂತೆ ಹಲವೆಡೆ ಕಸ ಸಂಗ್ರಹಕ್ಕೆ ಕೆಸರಿನ ರಸ್ತೆಗಳು ಅಡ್ಡಿಯಾಗಿವೆ. ಹಲವೆಡೆ ಕಸ ಸಂಗ್ರಹದ ತಳ್ಳುವ ಗಾಡಿಗಳು ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮನೆ ಮನೆ ಕಸ ಸಂಗ್ರಹ ಮಾಡುವ ನೌಕರರು ದಿನಕ್ಕೆ ಒಬ್ಬರಂತೆ ಕೆಲಸ ಬಿಟ್ಟು ಹೋಗುತ್ತಿದ್ದಾರೆ. ಇನ್ನು ಕೆಲವೆಡೆ ಕೆಸರಿನಲ್ಲಿ ತಳ್ಳುವ ಗಾಡಿಗಳು ಸಿಕ್ಕಿ ಹಾಕಿಕೊಳ್ಳುತ್ತಿವೆ. ಕೆಸರಾಗಿರುವ ಬಡಾವಣೆಗಳಲ್ಲಿ ಟಿಪ್ಪರ್ ಮೂಲಕ ಕಸ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಹಲವೆಡೆ ಅವುಗಳು ಹೋಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
 ಪ್ರತಿದಿನ ಮನೆ ಕಸ ಸಂಗ್ರಹವನ್ನು ಮಾಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ. ಸಂಪೂರ್ಣವಾಗಿ ಕೆಸರಾಗಿರುವ ಬಡಾವಣೆಗಳಲ್ಲಿ ಎರಡು ದಿನಕ್ಕೊಮ್ಮೆ ಕಸ ಸಂಗ್ರಹ ಮಾಡುತ್ತಿವೆ. ಇನ್ನು ಕೆಲವು ಬಡಾವಣೆಗಳಲ್ಲಿ ಕಳೆದ ಏಳೆಂಟು ದಿನಗಳಿಂದ ಕಸ ಸಂಗ್ರಹದ ಕೆಲಸ ಆಗಿಲ್ಲ. ಒಟ್ಟಾರೆ, ಒಳ ಚರಂಡಿ ಕಾಮಗಾರಿ ಕಸ ಸಂಗ್ರಹಕ್ಕೂ ಅಡ್ಡಗಾಲು ಹಾಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement