ಬಿಪಿಎಲ್ ಕಾರ್ಡ್ ಮಾನ್ಯತೆ ಮಾಡಲು ಆಗ್ರಹಿಸಿ ಮನವಿ
ಕಡೂರು: ತಾಲೂಕಿನಲ್ಲಿ ಸುಮಾರು 6,000 ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿ ಬಡವರಿಗೆ ಅನ್ಯಾಯ ಮಾಡಲಾಗಿದ್ದು ಕೂಡಲೇ ಮಾನ್ಯತೆ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ರವರಿಗೆ ಮನವಿ ಮಾಡಿದ್ದಾರೆ.
ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಎಲ್ಲ ಬಡವರಿಗೆ ಸಂತಸ ತಂದಿದೆ. ಆದರೆ ತಾಲೂಕಿನಲ್ಲಿ ವಾಸವಾಗಿರುವ ಬಹುತೇಕ ಕುಟುಂಬಗಳು ಸಣ್ಣ, ಅತಿ ಸಣ್ಣ ರೈತರು ಹಾಗೂ ಕೂಲಿ ಕಾರ್ಮಿಕರನ್ನು ಹೊಂದಿದ್ದು ಮಳೆಯನ್ನು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಇಂತಹವರ ಕಾರ್ಡ್ಗಳನ್ನು ಯಾವ ಮಾನದಂಡ ಉಪಯೋಗಿಸಿ ರದ್ದುಪಡಿಸಲಾಗಿದೆ ಎಂದು ಕಂಗಾಲಾಗಿದ್ದಾರೆ. ಆದ್ದರಿಂದ ರದ್ದುಪಡಿಸ ಲಾಗಿರುವ ಕಾರ್ಡುಗಳನ್ನು ಮಾನ್ಯತೆ ಮಾಡಿ ಪಡಿತರ ವಿತರಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ತಾಲೂಕಿನ ಜನತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.
ಇಂದು ಪದಗ್ರಹಣ ಸಮಾರಂಭ
ನರಸಿಂಹರಾಜಪುರ: ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಪದಗ್ರಹಣ ಸಮಾರಂಭವು ಜು.20 ರ ಶನಿವಾರ ಸಂಜೆ 6.30 ಗಂಟೆಗೆ ಕೃಷಿ ಭವನದಲ್ಲಿ ನಡೆಯಲಿದೆ.
2013-14 ನೇ ಸಾಲಿಗೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ಜಿ.ಎಚ್. ಸುಂದರೇಶ್ ಹಾಗೂ ಕಾರ್ಯದರ್ಶಿಯಾಗಿ ಜಿ. ದಿವಾಕರ ಆಯ್ಕೆಯಾಗಿದ್ದಾರೆ. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾಗಿ ಶೀಲಾ ಸುಂದರೇಶ್ ಹಾಗೂ ಕಾರ್ಯದರ್ಶಿಯಾಗಿ ಉಮಾ ಸತ್ಯನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿರುವ ರೋಟರಿ 3180 ರ ಮಾಜಿ ರಾಜ್ಯಪಾಲ ಎ.ಎಸ್.ಎನ್ ಹಬ್ಬಾರ್ ರೋಟರಿ ಕ್ಲಬ್, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಬಜೆಟ್ನಲ್ಲಿ ಅಂಗವಿಕಲರ ಕಡೆಗಣನೆ: ಆರೋಪ
ಚಿಕ್ಕಮಗಳೂರು: ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಅಂಗವಿಕಲರನ್ನು ಸಂಪೂರ್ಣ ಕಡೆಗಣಿಸಿದ್ದಾರೆಂದು ಕರ್ನಾಟಕ ಅಂಧರ ಒಕ್ಕೂಟದ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ ಹೇಳಿದ್ದಾರೆ.
ಇನ್ನಾದರೂ ಸರ್ಕಾರ ಗಮನಹರಿಸಿ ವಿಕಲಚೇತನರ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಕಾಲಕಾಲಕ್ಕೆ ವರದಿ ಸಲ್ಲಿಸಲು ಅನುಕೂಲವಾಗುವಂತೆ ವಿಕಲಚೇತನರ ಪ್ರತಿನಿಧಿಗಳನ್ನೊಳಗೊಂಡ ಶಾಶ್ವತ ಆಯೋಗ ರಚಿಸಬೇಕೆಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅಗತ್ಯ
ಚಿಕ್ಕಮಗಳೂರು: ಹಾಸ್ಟೆಲ್ ವಿದ್ಯಾರ್ಥಿಗಳು ಮನೆಯಿಂದ ದೂರುವಿರುವುದನ್ನು ಏಕಾಗ್ರತೆಯಿಂದ ಓದಲು ಸಿಕ್ಕ ಅವಕಾಶವನ್ನಾಗಿ ಬಳಸಿಕೊಂಡು ಸ್ಪರ್ಧಾತ್ಮಕ ಜಗತ್ತನ್ನು ಅರ್ಹತೆಯಿಂದ ಗೆಲ್ಲಲು ಸಿದ್ಧರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಗುರುವಾರ ಸಂಜೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ ನೀಡಿ, ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಗೆ ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಸರ್ಕಾರ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಸೌಲಭ್ಯ ನೀಡಿ ಹಾಸ್ಟೆಲ್ ಸೌಕರ್ಯವನ್ನು ಒದಗಿಸಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಪೋಷಕರು ಮಕ್ಕಳನ್ನು ಹಾಸ್ಟೆಲ್ಗೆ ಸೇರಿಸಿ ತಮ್ಮ ಜವಾಬ್ದಾರಿ ಕಳೆದುಕೊಳ್ಳದೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ನೀಡಿ, ತರಗತಿ ಶಿಕ್ಷಕರಿಂದ ಸತತ ಮಾಹಿತಿ ಪಡೆದು ಮಕ್ಕಳ ಕುಂದುಕೊರತೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು. ಭೇಟಿಯ ಸಮಯದಲ್ಲಿ ಹಾಸ್ಟೆಲ್ ಸುತ್ತಮುತ್ತಲು ಪಾರ್ಥೇನಿಯಂ ಗಿಡ ಬೆಳೆದಿರುವುದನ್ನು ಕಂಡ ಅಧ್ಯಕ್ಷರು, ಶ್ರಮದಾನದ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸಿದರು. ಕುಡಿಯುವ ನೀರಿನ ಹಾಗೂ ಬಸ್ ನಿಲುಗಡೆ ಸಮಸ್ಯೆಗಳಿದ್ದು, ಪರಿಹರಿಸುವಂತೆ ಕೋರಿದರು.