ಯಶಸ್ವಿನಿ ಯೋಜನೆಯಿಂದ ಆರೋಗ್ಯ ರಕ್ಷಣೆ
ಚಿಕ್ಕಮಗಳೂರು: ಯಶಸ್ವಿನಿ ಯೋಜನೆಯ ಸದಸ್ಯತ್ವ ಪಡೆದುಕೊಳ್ಳುವುದರೊಂದಿಗೆ ಗ್ರಾಮೀಣ ಸಹಕಾರಿಗಳು ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆ ಒದಗಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ವಿ. ಯಶವಂತ್ ಹೇಳಿದ್ದಾರೆ.
ಗುರುವಾರ ಸಂಜೆ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಶಸ್ವಿನಿ ಸಹಕಾರ ರೈತರ ಆರೋಗ್ಯ ರಕ್ಷಣಾ ಯೋಜನೆಯು ಗ್ರಾಮೀಣ ಸಹಕಾರಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆ ಒದಗಿಸುವ ಒಂದು ಸ್ವಯಂ ನಿಧಿ ಶಸ್ತ್ರ ಚಿಕಿತ್ಸಾ ಯೋಜನೆಯಾಗಿದೆ. ನೋಂದಾಯಿತ ಸದಸ್ಯರು ಟ್ರಸ್ಟ್ ವತಿಯಿಂದ ಗುರುತಿಸಿದ 803 ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದೆಂದರು.
ಯೂನಿಕ್ ಐಡಿ: ಸಹಕಾರ ಸಂಘಗಳ ಸದಸ್ಯತ್ವ ಹೊಂದಿರುವ ಪ್ರತಿ ಸದಸ್ಯರು ಇಂದಿನಿಂದ ಅಕ್ಟೋಬರ್ 15 ರೊಳಗೆ 210 ರು.ಗಳ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದ ಅವರು, ನೋಂದಾಯಿತ ಪ್ರತಿ ಸದಸ್ಯರಿಗೂ ಯೂನಿಕ್ ಐಡಿ ಸಂಖ್ಯೆ ಹೊಂದಿರುವ ಗುರುತಿನ ಕಾರ್ಡನ್ನು ನೀಡಲಾಗುವುದು. ಇದನ್ನು ಹಾಜರುಪಡಿಸಿ ಚಿಕಿತ್ಸೆ ಪಡೆಯಬಹುದು ಎಂದರು.
ಅಧಿಕಾರಿಗಳಿಗೆ ಸೂಚನೆ: ಜಿಲ್ಲೆಯಲ್ಲಿ ಕಳೆದ ವರ್ಷ 72 ಸಾವಿರ ಸಹಕಾರಿಗಳು ನೋಂದಣಿಯಾಗಿದ್ದು, ಪ್ರಸ್ತುತ ಸಾಲಿನಲ್ಲಿ 1.50 ಲಕ್ಷಕ್ಕಿಂತ ಹೆಚ್ಚು ಜನ ಸದಸ್ಯರನ್ನು ನೋಂದಣಿ ಮಾಡಿಸಲು ಕಾರ್ಯಪ್ರವೃತ್ತರಾಗಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಹಕಾರ ಸಂಘಗಳ ಉಪ ನಿಬಂಧಕ ಕೆ.ಎನ್. ಶಿವಕುಮಾರಸ್ವಾಮಿ ಮಾತನಾಡಿ, ಗ್ರಾಮೀಣ ಸಹಕಾರ ಸಂಘಗಳಾದ ಕೃಷಿ ಪತ್ತಿನ ಸಂಘ, ಗ್ರಾಮೀಣ ವಿವಿದ್ಯೋದೇಶ ಸಂಘ, ಹಾಲು ಉತ್ಪಾದಕ ಸಂಘ, ಕೃಷಿ ಉತ್ಪನ್ನ ಮಾರಾಟ ಸಂಘ, ತೋಟಗಾರಿಕಾ ಸಹಕಾರ ಸಂಘ, ಕುರಿ ಸಾಗಾಣಿಕೆ ಮತ್ತು ಕುರಿ ಉತ್ಪನ್ನ ಸಹಕಾರ ಸಂಘ, ಕೃಷಿ, ತೋಟಗಾರಿಕೆ, ಹೈನುಗಾರಿಕೆ ಉತ್ಪನ್ನಗಳ ಸಂಸ್ಕರಣಾ ಸಹಕಾರ ಸಂಘ, ಸಹಕಾರಿ ಸಕ್ಕರೆ ಕಾರ್ಖಾನೆಗಳ, ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕ್ಗಳು, ಗ್ರಾಮೀಣ ಹಾಗೂ ನಗರ ಪ್ರದೇಶದ ಮೀನುಗಾರರ, ಬೀಡಿ ಕಾರ್ಮಿಕರ ಮತ್ತು ನೇಕಾರ ಸಹಕಾರ ಸಂಘಗಳ ಇತ್ಯಾದಿಗಳೊಂದಿಗೆ ಸದಸ್ಯನಾಗಿ ಮೂರು ತಿಂಗಳು ಮೇಲ್ಪಟ್ಟವರು ಈ ಯೋಜನೆಯ ಸದಸ್ಯರುಗಳಾಗಬಹುದಾಗಿದೆ ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಚ್.ಜೆ. ಚಂದ್ರಶೇಖರಯ್ಯ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಲೋಕೇಗೌಡ, ಕಾಸ್ಕಾರ್ಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸದಾನಂದ್, ಜಿಲ್ಲಾ ಯಶಸ್ವಿನಿ ಯೋಜನೆಗಳ ಸಂಯೋಜಕ ಈಶ್ವರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಚ್.ಜಿ. ಬಸವರಾಜ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.