ವೈದ್ಯಾಧಿಕಾರಿ ಕಚೇರಿಯಲ್ಲಿ ಬೆಂಕಿ
ಚಿಕ್ಕಮಗಳೂರು: ಇಲ್ಲಿನ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಶಾರ್ಟ್ ಸೆರ್ಕ್ಯೂಟ್ನಿಂದಾಗಿ ಸುಮಾರು 5 ಲಕ್ಷ ರುಪಾಯಿಯಷ್ಟು ಹಾನಿಯಾಗಿದೆ.
ಬೆಂಕಿ ಹೊತ್ತಿಕೊಂಡ ಕೆಲವೇ ಸಮಯದಲ್ಲಿ ಗಮನಕ್ಕೆ ಬಂದಿದ್ದರಿಂದ ಮುಂದಾಗಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ನಗರದ ಬೇಲೂರು ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆವರಣದಲ್ಲಿ ತಾಲೂಕು ವೈದ್ಯಾಧಿಕಾರಿಗಳ ಕಚೇರಿ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಒಂದೇ ಸೂರಿನಡಿಯಲ್ಲಿವೆ. ಇದರ ಆಸುಪಾಸಿನಲ್ಲಿ ಶಿಶು ಅಭಿವೃದ್ಧಿ ಇಲಾಖೆ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಿವೆ.
ವಸ್ತುಗಳು ಭಸ್ಮ: ಶುಕ್ರವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯೊಳಗೆ ಶಾರ್ಟ್ ಸೆರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದ್ದು, ಇದರಿಂದಾಗಿ ಕಚೇರಿಯೊಳಗೆ ಇದ್ದ ಎರಡು ಕಂಪ್ಯೂಟರ್, ಜೆರಾಕ್ಸ್, ಯುಪಿಎಸ್, ಟೇಬಲ್, ಚೇರ್ಗಳು ಸೇರಿದಂತೆ ಇತರೆ ವಸ್ತುಗಳು ಸುಟ್ಟು ಹೋಗಿವೆ.
ಕಚೇರಿಯೊಳಗೆ ಬೆಂಕಿ ಕಾಣಿಸಿಕೊಂಡಿರುವುದು ಶಿಶು ಅಭಿವೃದ್ಧಿ ಇಲಾಖೆಯಲ್ಲಿದ್ದವರು ಕಂಡಿದ್ದು, ಅವರು ಕೂಡಲೇ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ್ದಾರೆ. ಆಗ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಹೊತ್ತಿರುವುದು ತಕ್ಷಣಕ್ಕೆ ಗಮನಕ್ಕೆ ಬರದೆ ಹೋಗಿದ್ದರೆ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತಿತ್ತು.