ಹಳೇ ಕ್ಯಾರಿ ಓವರ್ ಪದ್ಧತಿ ಮುಂದುವರೆಸಲು ಆಗ್ರಹ
ಚಿಕ್ಕಮಗಳೂರು: ಪಾಲಿಟೆಕ್ನಿಕ್ ಡಿಪ್ಲೋಮಾ ಕೋರ್ಸ್ಗೆ ಕಳೆದ ಸಾಲಿನಲ್ಲಿ ಜಾರಿಯಲ್ಲಿದ್ದ ಕ್ಯಾರಿ ಓವರ್ ಪದ್ಧತಿ ಮುಂದುವರೆಸುವಂತೆ ಒತ್ತಾಯಿಸಿ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ನಗರದಲ್ಲಿ ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಕರವೇ ನೇತೃತ್ವದಲ್ಲಿ ಪಾಲಿಟೆಕ್ನಿಕ್ ಆವರಣದಿಂದ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಹಳೆಯ ಕ್ಯಾರಿ ಓವರ್ ಪದ್ಧತಿಯನ್ನೇ ಮುಂದುವರೆಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ರಾಜ್ಯ ಸರ್ಕಾರ ಪ್ರತಿವರ್ಷ ಪಾಲಿಟೆಕ್ನಿಕ್ ಡಿಪ್ಲೋಮಾ ಕೋರ್ಸಿಗೆ ಸಂಬಂಧಿಸಿ ಹೊಸ ಪದ್ಧತಿ ಜಾರಿಗೆ ತರುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿ ವರ್ಷ ಬದಲಾವಣೆ: ಕಳೆದ ಸಾಲಿನಲ್ಲಿ ಪಾಲಿಟೆಕ್ನಿಕ್ ಡಿಪ್ಲೋಮಾ ಕೋರ್ಸ್ಗೆ 10 ವಿಷಯಗಳು ಅಥವಾ ಅದಕ್ಕಿಂತ ಕಡಿಮೆ ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೂರು ಮತ್ತು ಐದನೇ ಸೆಮಿಸ್ಟರ್ಗೆ ಸೇರಲು ಅವಕಾಶವಿತ್ತು. ಆದರೆ, ಅದನ್ನು ಈ ಬಾರಿ ರದ್ದುಪಡಿಸಿರುವ ನೂತನ ಸರ್ಕಾರ ನಾಲ್ಕು ವಿಷಯಗಳು ಅಥವಾ ಅದಕ್ಕಿಂತ ಕಡಿಮೆ ವಿಷಯಗಳಲ್ಲಿ ಅನುತ್ತೀರ್ಣರಾದವರಿಗೆ ಮಾತ್ರ ಮೂರನೇ ಹಾಗೂ ಐದನೇ ಸೆಮಿಸ್ಟರ್ಗೆ ಸೇರಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಸರ್ಕಾರದ ಹೊಸ ಪದ್ಧತಿಯಿಂದಾಗಿ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮುಂದುವರೆಯಲು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಸಾಲಿನಲ್ಲಿ ಜಾರಿಯಲ್ಲಿದ್ದ ಕ್ಯಾರಿ ಓವರ್ ಪದ್ಧತಿಯನ್ನೇ ಮುಂದುವರೆಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ತಕ್ಷಣ ಹಳೇ ಪದ್ಧತಿ ಮುಂದುವರೆಸಬೇಕು ಎಂದು ಒತ್ತಾಯಿಸಿದ ಜಗದೀಶ್, ಬೇಡಿಕೆ ಈಡೇರದಿದ್ದಲ್ಲಿ ಅನಿರ್ಧಿಷ್ಟ ಕಾಲ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು. ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಕೆಂಪನಹಳ್ಳಿ ಅಶೋಕ್, ಕಾರ್ಯದರ್ಶಿ ಪಂಚಾಕ್ಷರಿ, ವಿದ್ಯಾರ್ಥಿ ಘಟಕದ ಗುರುರಾಜ್, ಪ್ರೀತಮ್, ಶರತ್, ಜೆ. ಕಾರ್ತಿಕ್, ಶೋಬಿತ, ವೈ.ಬಿ. ಸೌಮ್ಯ, ಕೆ.ಎಸ್. ತೇಜಸ್ವಿನಿ ಪಾಲ್ಗೊಂಡಿದ್ದರು.