ಶಾಸಕ ಜೀವರಾಜ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಜವಾಬ್ದಾರಿ
ಚಿಕ್ಕಮಗಳೂರು: ಮಾಜಿ ಸಚಿವ, ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಹೊಸ ಜವಬ್ದಾರಿ ನೀಡಲಾಗಿದೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಬಿಜೆಪಿ ಅಧ್ಯಕ್ಷರ ಚುನಾವಣೆಯಲ್ಲಿ ಡಿ.ಎನ್. ಜೀವರಾಜ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನಂತರ ನಡೆದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದ ಡಿ.ಎನ್. ಜೀವರಾಜ್, ನನ್ನ ಜೀವನದಲ್ಲಿ ರಾಜಕೀಯ ನಡೆ ಆಕಸ್ಮಿಕ. 1985ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ವೋಟ್ ಹಾಕಿದ ಸಂದರ್ಭದಲ್ಲಿ ಮುಂದೊಂದು ದಿನ ಈ ಕ್ಷೇತ್ರದಲ್ಲಿ ನಾನು ಬಿಜೆಪಿಯ ಅಭ್ಯರ್ಥಿಯಾಗುತ್ತೇನೆಂದು ಕನಸಿನಲ್ಲೂ ಊಹಿಸಿರಲಿಲ್ಲ. ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದೆ ಪಕ್ಷವನ್ನು ಇನ್ನಷ್ಟು ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ನಾಗರಿಕರು ಸಹಕರಿಸಬೇಕು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಶ್ರಮ ಹಾಕಿ ಬಿಜೆಪಿಯನ್ನು ಈ ಕ್ಷೇತ್ರದಲ್ಲಿ ಗೆಲ್ಲಿಸಬೇಕು. ಬರುವ ಲೋಕಸಭಾ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಅವರ ಕೈ ಬಲಪಡಿಸಲು ಪಕ್ಷದ ಕಾರ್ಯಕರ್ತರು, ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಉತ್ಸಾಹ ಕಳೆದುಕೊಂಡಿದೆ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ರುಪಾಯಿ ಕೆಜಿಗೆ ಅಕ್ಕಿ ನೀಡುತ್ತಿದೆ. ಇದರ ಜತೆಗೆ ಮದ್ಯ ಮಾರಾಟದ ದರ ಹೆಚ್ಚಿಸಿ ಮುಖ್ಯಮಂತ್ರಿಯವರು ಬುದ್ಧಿವಂತ ರಾಜಕಾರಣಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಕಳೆದ ಎರಡು ತಿಂಗಳಲ್ಲಿ ಉತ್ಸಾಹ ಮತ್ತು ಸಂಭ್ರಮ ಎರಡನ್ನೂ ಕಳೆದುಕೊಂಡಿದೆ ಎಂದರು. ಗ್ರಾಮ ಸಭೆ, ವಾರ್ಡ್ ಸಭೆ ನಡೆಸದೆ ಹೋದರೆ ಗ್ರಾಪಂ ಅಧ್ಯಕ್ಷರನ್ನು ವಜಾ ಮಾಡಲು ರಾಜ್ಯ ಸರ್ಕಾರ ಮಸೂದೆ ಜಾರಿಗೆ ತಂದಿದೆ. ಇದರಿಂದ ಜನಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸಲು ಹೊರಟಿದೆ. ಇದನ್ನು ಖಂಡಿಸಿ ಜು. 25 ರಂದು ಬಿಜೆಪಿ ವಿಧಾನಸೌಧ ಚಲೋ ಪ್ರತಿಭಟನೆ ಹಮ್ಮಿಕೊಂಡಿದೆ. ಇದಕ್ಕೆ ಎಲ್ಲಾ ಗ್ರಾಮ ಪಂಚಾಯ್ತಿ ಸದಸ್ಯರು ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕರ್ತರ ಪಕ್ಷ: ಶಾಸಕ ಸಿ.ಟಿ. ರವಿ ಮಾತನಾಡಿ, ಬಿಜೆಪಿ ಪಕ್ಷ ಇರುವೆ ಜಾತಿಯ ಪಕ್ಷ, ಏಡಿ ಜಾತಿಯ ಪಕ್ಷವಲ್ಲ. ಬಿಜೆಪಿ ಕಾರ್ಯಕರ್ತರನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ. ಪಕ್ಷ ನಿಷ್ಟೆ ಮತ್ತು ಕಾರ್ಯಕರ್ತರ ಶ್ರಮದಿಂದ ಉನ್ನತ ಸ್ಥಾನಕ್ಕೆ ಬರಬಹುದು. ನಮ್ಮ ಪಕ್ಷ ಸಾಮಾನ್ಯ ಕಾರ್ಯಕರ್ತರ ಪಕ್ಷವಾಗಿದೆ. ನಮ್ಮ ಪಕ್ಷಕ್ಕೆ 6 ದಶಕಗಳ ಇತಿಹಾಸವಿದೆ. ಅಟಲ್ ಬಿಹಾರಿ ವಾಜಪೇಯಿ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕೆ ಬಂದು ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ್ದರು ಎಂದು ಹೇಳಿದರು.
ಮುಂದೆ ರಾಜಕೀಯ ಸುವರ್ಣ ಕಾಲ ನೋಡಲು ಜನ ಮತ್ತು ಕಾರ್ಯಕರ್ತರು ತಯಾರಾಗಬೇಕು. ನಮ್ಮ ಪಕ್ಷ ಕಾಂಗ್ರೆಸ್ನಂತಹ ಗುಲಾಮಗಿರಿ ಪಕ್ಷವಲ್ಲ. ಈ ಬಾರಿ ನರೇಂದ್ರ ಮೋದಿ ಪ್ರಧಾನಮಂತ್ರಿ ಅಭ್ಯರ್ಥಿಯಾಗುತ್ತಾರೆ. ಅವರ ಭಾಷಣ ಕೇಳಲು ದೇಶಾದ್ಯಂತ ಯುವಕರು ಮತ್ತು ಜನರು ಸ್ವಯಂ ಪ್ರೇರಿತರಾಗಿ ಬರುತ್ತಿದ್ದಾರೆ. ದೇಶದ ಉಳಿವಿಗಾಗಿ ಎಲ್ಲರೂ ಸಹಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣೀಕ್, ರಾಷ್ಟ್ರದಲ್ಲಿ ದೊಡ್ಡ ರಾಜಕೀಯದ ಬಿರುಗಾಳಿ ಬೀಸುತ್ತಿದೆ. ಬಿಜೆಪಿಗೆ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಬೆಂಬಲಿಸಬೇಕು. ಕಾಂಗ್ರೆಸ್ ಸರ್ಕಾರ ದೇಶ ರಕ್ಷಣೆಗಿಂತ ತನ್ನನ್ನು ತಾನೇ ರಕ್ಷಣೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಗ್ರಾಪಂ ಸದಸ್ಯನಾಗಿ ಸೇವೆ ಸಲ್ಲಿಸಲು ಅವಕಾಶ ಇದೆ. ಅವರಿಗೆ ಗೌರವಧನ ನೀಡಲು ಬಿಜೆಪಿ ಸರ್ಕಾರ ಬರಬೇಕಾಗಿತ್ತು. ಬಿಜೆಪಿ ದೇಶದ ರಕ್ಷಣೆಗೆ ಮುಂದಾಗಿದೆ. ಭಯೋತ್ಪಾದನೆ ಕೊನೆಗಣಿಸಿ ಕಾಡಿನಲ್ಲಿ ಬಂದೂಕು ಹಿಡಿದು ಓಡಾಡುವರಿಗೆ ಕಡಿವಾಣ ಹಾಕಬೇಕು ಎಂದ ಅವರು, ದೇವಸ್ಥಾನದ ರಥ ಎಳೆಯಲು ಒಬ್ಬರಿಂದ ಸಾಧ್ಯವಿಲ್ಲ. ಪಕ್ಷವನ್ನು ಮೇಲೆ ಒಯ್ಯಲು ಒಬ್ಬರಿಂದ ಸಾಧ್ಯವಿಲ್ಲ. ಅದುದರಿಂದ ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕಿವಿ ಮಾತು ಹೇಳಿದರು.
ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಂ.ಕೆ. ಪ್ರಾಣೇಶ್ ಮಾತನಾಡಿ, ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ರೀತಿಯಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಎರಡು ಬಾರಿ ಜಿಲ್ಲಾಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಸಾಮಾನ್ಯ ಕಾರ್ಯಕರ್ತರಿಗೂ ನಿಗಮ, ಮಂಡಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಮುಂದೆ ಲೋಕಸಭಾ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರು ಅವರ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಉಪಾಧ್ಯಕ್ಷೆ ಸುಜಾತ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಎಸ್. ಬೋಜೇಗೌಡ, ತರೀಕೆರೆ ಮಂಜುನಾಥ್. ಜಿಪಂ ಸದಸ್ಯರಾದ ಕಲ್ಮರಡಪ್ಪ, ನಿರಂಜನ್, ಬಿಜೆಪಿ ನಗರಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ದೇವನೂರು ರವಿ, ಶಂಕರ್ ಇದ್ದರು.