ಗುತ್ತಿಗೆದಾರರ ನಿರ್ಲಕ್ಷ್ಯ; ಶಾಲಾ ಕಟ್ಟಡ ನೆನೆಗುದಿಗೆ
ನರಸಿಂಹರಾಜಪುರ: ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಮೆಣಸೂರು ಗ್ರಾಪಂ ವ್ಯಾಪ್ತಿಯ ಅಳಲಗೆರೆ ಎಂಬಲ್ಲಿ ನಿರ್ಮಾಣವಾಗುತ್ತಿರುವ ಸುಮಾರು ರು. 5.30 ಕೋಟಿ ರುಪಾಯಿ ವೆಚ್ಚದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಆಮೆ ನಡಿಗೆಯಿಂದ ಸಾಗುತ್ತಿದೆ.
ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ನಿರ್ಮಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಂಕುಸ್ಥಾಪನೆಯನ್ನು 2011 ರ ಮೇ 1 ರಂದು ಶಾಸಕ ಡಿ.ಎನ್. ಜೀವರಾಜ್ ನೆರವೇರಿಸಿದ್ದರು.
ಅರ್ಧ ಕಾಮಗಾರಿಯೂ ಮುಗಿದಿಲ್ಲ: ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಮುಗಿಸಬೇಕು ಎಂದು ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ ಸೂಚಿಸಿದ್ದರು. ಗುತ್ತಿಗೆದಾರರು 2012 ರ ನವಂಬರ್ ತಿಂಗಳ ಒಳಗೆ ಕಟ್ಟಡವನ್ನು ಬಿಟ್ಟುಕೊಡಬೇಕಾಗಿತ್ತು. ಆದರೆ, 2013 ರ ಜುಲೈ ಮುಗಿಯುತ್ತ ಬಂದರೂ ಕಟ್ಟಡದ ಅರ್ಧ ಕಾಮಗಾರಿಯೂ ಮುಗಿದಿಲ್ಲ. ಜೊತೆಗೆ ಕಟ್ಟಡಕ್ಕೆ ಬಳಸಿದ ಇಟ್ಟಿಗೆಯ ಗುಣಮಟ್ಟವೂ ಚೆನ್ನಾಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಬಾಡಿಗೆ ಕಟ್ಟಡದಲ್ಲಿ ಮೊರಾರ್ಜಿ ಶಾಲೆ: 2007 ಏಪ್ರಿಲ್ ತಿಂಗಳಲ್ಲಿ ನರಸಿಂಹರಾಜಪುರ ಬಸ್ತಿಮಠದ ಬಾಡಿಗೆ ಕಟ್ಟಡದಲ್ಲಿ ಮೊರಾರ್ಜಿ ಶಾಲೆ ಪ್ರಾರಂಭವಾಯಿತು. 6 ನೇ ತರಗತಿಯಿಂದ 10 ನೇ ತರಗತಿಯ 254 ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಗೆ ಕಾಯಂ ಕಟ್ಟಡ ಬೇಕು ಎಂಬ ಶಾಸಕರ ಪ್ರಯತ್ನದಿಂದ ಸೌತಿಕೆರೆ ಸಮೀಪದ ಅಳಲಗೆರೆ ಎಂಬಲ್ಲಿ 10 ಎಕರೆ ಜಾಗ ಮಂಜೂರು ಮಾಡಿಸಿದ್ದರು. ಪ್ರಸ್ತುತ ಈಗಿರುವ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶೌಚಾಲಯ ಇಲ್ಲದೆ ತೊಂದರೆಯಾಗುತ್ತಿದೆ. ವಿಶೇಷವಾಗಿ ಬಾಲಕಿಯರು ತೊಂದರೆ ಅನುಭವಿಸುತ್ತಿದ್ದಾರೆ. ಮುಂದೆ ನೂತನ ಕಟ್ಟಡ ಆಗಲಿದೆ ಎಂಬ ಸಂತಸದಿಂದ ಕಳೆದ 2 ವರ್ಷಗಳಿಂದಲೂ ಕಾಯುತ್ತಿದ್ದ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಟ್ಟಡದ ಆಮೆ ನಡೆಗೆ ಕಾಮಗಾರಿಯಿಂದ ನಿರಾಸೆ ಉಂಟಾಗಿದೆ.
ಕಪ್ಪು ಪಟ್ಟಿಗೆ ಸೇರಿಸಲು ಚಿಂತನೆ: ಕಟ್ಟಡದ ಕಳಪೆ ಕಾಮಗಾರಿ ಹಾಗೂ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ್ ಪ್ರತಿಕ್ರಿಯೆ ನೀಡಿ, ಈಗಾಗಲೇ ಶಾಸಕರು ಜಿಪಂ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿ ಹಿಂದಳಿದ ವರ್ಗಗಳ ಕಲ್ಯಾಣ ಇಲಾಖೆಯ ಮುಖ್ಯಸ್ಥರಿಗೆ ಕಟ್ಟಡ ಬೇಗ ಮುಗಿಸದಿದ್ದರೆ ಗುತ್ತಿಗಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ತಾಪಂ ಕೆಡಿಪಿ ಸಭೆಯಲ್ಲಿ ಗುತ್ತಿಗೆದಾರರ ವಿರುದ್ಧ ನಿರ್ಣಯ ತೆಗೆದುಕೊಂಡು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗೆ ಶಿಪಾರಸ್ಸು ಮಾಡಿ ಪತ್ರ ಬರೆದಿದ್ದೇವೆ. ಬೆಂಗಳೂರಿನಲ್ಲಿ ಕುಳಿತ ಗುತ್ತಿಗೆದಾರರು ಈ ಟೆಂಡರ್ ಮೂಲಕ ಗುತ್ತಿಗೆ ಹಿಡಿದು ನಂತರ ಸಬ್ ಕಾಂಟ್ರಾಕ್ಟ್ ಕೊಟ್ಟಿದ್ದಾರೆ. ಹೀಗೆ 5 ಗುತ್ತಿಗೆದಾರರು ಬದಲಾಗಿರುವುದೇ ಕಟ್ಟಡದ ಕಳಪೆ ಕಾಮಗಾರಿ ಹಾಗೂ ನಿಧಾನಗತಿಗೆ ಕಾರಣವಾಗಿದೆ ಎಂದರು.
ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಯಂತೆ ಸರ್ಕಾರ ಕಟ್ಟಡಕ್ಕೆ ಹಣ ಮಂಜೂರು ಮಾಡಿದ್ದರೂ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಕಾಯಂ ಕಟ್ಟಡ ಉಪಯೋಗಕ್ಕೆ ಸಕಾಲಕ್ಕೆ ಸಿಗದೆ ಮರೀಚಿಕೆಯಾಗುತ್ತಿದೆ.
- ಯಡಗೆರೆ ಮಂಜುನಾಥ್