ಭಜನಾ ತಂಡಗಳ ಸಮಾವೇಶ
ಶಿವಮೊಗ್ಗ: ನಗರದ ಭಜನಾಮಂಡಳಿಗಳ ಒಕ್ಕೂಟ ಭಜನಾ ಪರಿಷತ್ ಆ.31 ಮತ್ತು ಸೆ.1ರಂದು 60 ಅಡಿ ರಸ್ತೆಯಲ್ಲಿರುವ ಶನೇಶ್ಚರ ದೇವಸ್ಥಾನ ಹಾಗೂ ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾಮೂಹಿಕ ವಿಷ್ಣು ಸಹಸ್ರನಾಮಾವಳಿ ಅರ್ಚನೆ ಮತ್ತು ಭಜನಾ ತಂಡಗಳ ಸಮಾವೇಶ ಹಮ್ಮಿಕೊಂಡಿದೆ. ಸಮಾವೇಶದಲ್ಲಿ ಪಾಲ್ಗೊಂಡ ಭಜನಾ ಮಂಡಳಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರತಿ ತಂಡಕ್ಕೆ 10 ನಿಮಿಷಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ಮಕ್ಕಳು ರಾಧಾಕೃಷ್ಣ ವೇಷಭೂಷದಲ್ಲಿ ಪಾಲ್ಗೊಳ್ಳಬಹುದು. ಸದಸ್ಯರು ದಾಸರ ಪದಕ್ಕೆ ಸಮೂಹ ನೃತ್ಯ, ಜಾನಪದ, ದೇಶಭಕ್ತಿ ಗೀತೆಗೆ ನೃತ್ಯ, ಪೌರಾಣಿಕ ಕಿರುನಾಟಕ, ಹಾಸ್ಯ ಚಟಾಕಿ ಮತ್ತು ರಾಮಾಯಣ ರಸಪ್ರಶ್ನೆ ಮತ್ತಿತರ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ನ ಅಧ್ಯಕ್ಷ ಬಿ. ಸಂಜೀವ ಶೆಟ್ಟಿ ತಿಳಿಸಿದ್ದಾರೆ.
ಸರ್ವ ಸದಸ್ಯರ ಸಭೆ
ಶಿವಮೊಗ್ಗ: ಕರ್ನಾಟಕ ಸುಗಮ ಸಂಗೀತ ಪರಿಷತ್ ಆ.18ರಂದು ಬೆಳಿಗ್ಗೆ 10ಕ್ಕೆ ಜಯನಗರದ 7ನೇ ಬಡಾವಣೆಯಲ್ಲಿರುವ ನ್ಯಾಷನಲ್ ಕಾಲೇಜಿನ ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಪರಿಷತ್ನ ವಾರ್ಷಿಕ ಸರ್ವ ಸದಸ್ಯರ ಕರೆಯಲಾಗಿದೆ. ಎಲ್ಲಾ ಸದಸ್ಯರು ಪಾಲ್ಗೊಳ್ಳಬೇಕು ಎಂದು ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ: ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ರಾಜ್ಯ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಗೌರವ ಅಧ್ಯಕ್ಷರಾಗಿ ವಿ. ವೆಂಕಟರಮಣ, ಅಧ್ಯಕ್ಷರಾಗಿ ಬಿ.ಆರ್. ದಿವಾಕರ ಮತ್ತು ಉಪಾಧ್ಯಕ್ಷ ಶೇಖರಪ್ಪ, ಚಂದ್ರಯ್ಯ ಆಯ್ಕೆಯಾಗಿದ್ದಾರೆ. ಸಲಹೆಗಾರರಾಗಿ ಗುರುಪಾದಪ್ಪ, ಕಾರ್ಯದರ್ಶಿ ಪಿ.ಎಂ. ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಮಹಾಂತೇಶ್ರಾವ್, ಖಜಾಂಚಿ ಕರಿಯಮ್ಮ ಹಾಗೂ ಕಾರ್ಯಕಾರಿ ಸಮಿತಿಗೆ ಲೋಕೇಶ್, ರವಿ, ಚಂದು, ರೂಪ, ಶಾಂತ, ಸವಿತ ಮತ್ತು ಹೇಮಾವತಿ ಆಯ್ಕೆಯಾಗಿದ್ದಾರೆ.
ಶೇ.100 ಫಲಿತಾಂಶ
ಶಿವಮೊಗ್ಗ: ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಮಾರ್ಚ್ 2013ರಲ್ಲಿ ನಡೆಸಿದ ಪ್ರಥಮ ಮತ್ತು ದ್ವಿತೀಯ ವರ್ಷದ ಚಿತ್ರಕಲಾ ಫೌಂಡೇಶನ್ ಹಾಗೂ ಬ್ಯಾಚುಲರ್ ಆಫ್ ವಿಜುಯಲ್ ಆರ್ಟ್ ಪದವಿ ಕೋರ್ಸ್ಗಳ ಪರೀಕ್ಷೆಯಲ್ಲಿ ನಗರದ ಜಗದ್ಗುರು ಪಂಚಾಚಾರ್ಯ ಚಿತ್ರಕಲಾ ಮಹಾವಿದ್ಯಾಲಯ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದೆ. ಈ ಫಲಿತಾಂಶಕ್ಕೆ ಕಾರಣರಾದ ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ವಿಘ್ನೇಶ್ವರಯ್ಯ ನೀ ಸೋಲಾಪುರ ಅಭಿನಂದನೆ ಸಲ್ಲಿಸಿದ್ದಾರೆ.