ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ನೀಡಿ
ತರೀಕೆರೆ: ಮಕ್ಕಳಿಗೆ ಪೌಷ್ಠಿಕ ಹಾಗೂ ಉತ್ತಮ ಆಹಾರ ನೀಡುವಲ್ಲಿ ಅಧಿಕಾರಿಗಳು ಗಮನ ಹರಿಸಬೇಕೆಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.
ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಅಕ್ರಮಗಳ ಬಗ್ಗೆ ದೂರು ಬರುತ್ತಿದ್ದು, ಅಧಿಕಾರಿಗಳು ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಪ್ರತಿ ಶಾಲೆ ಹಾಗೂ ಹಾಸ್ಟೆಲ್ಗಳಿಗೆ ತಾವೇ ಖುದ್ದು ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಸೂಕ್ತ ಕ್ರಮ: ಕೆಡಿಪಿ ಮತ್ತಿತರ ಸಭೆಗಳಿಗೆ ವಿವಿಧ ಇಲಾಖೆ ಅಧಿಕಾರಿಗಳು ಖುದ್ದು ಹಾಜರಾಗದೆ, ನೌಕರರನ್ನು ಕಳುಹಿಸುತ್ತಿರುವುದು ಸಮಂಜಸವಲ್ಲ, ಮುಂದಿನ ಯಾವುದೇ ಸಭೆಗಳಿಗೆ ಅಧಿಕಾರಿಗಳೇ ಖುದ್ದು ಹಾಜರಾಗಿ ಸಂಬಂಧಿಸಿದ ಮಾಹಿತಿಯನ್ನು ವಿವರವಾಗಿ ನೀಡಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ತಾಪಂ ಅಧ್ಯಕ್ಷೆ ಶಾಂತ ಗುರುಮೂರ್ತಿ, ಉಪಾಧ್ಯಕ್ಷೆ ಗೌರಮ್ಮ ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಜಿಪಂ ಸದಸ್ಯ ಕೆ.ಪಿ. ಕುಮಾರ್, ಇಒ ದೇವರಾಜ್, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.