ಅನ್ನಭಾಗ್ಯ ಅಕ್ಕಿ ವಿತರಣೆ
ಕೊಪ್ಪ: ತಾಲೂಕಿನ ನಾರ್ವೆ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ನ್ಯಾಯಬೆಲೆ ಅಂಗಡಿಯಲ್ಲಿ ರಾಜ್ಯ ಸರ್ಕಾರದ ಅನ್ನಭಾಗ್ಯಯೋಜನೆಯ ಅಕ್ಕಿಯನ್ನು ಬಿಪಿಎಲ್ ಪಡಿತರದಾರಿಗೆ ಸಂಘದ ಅಧ್ಯಕ್ಷ ಮರಿತೊಟ್ಲು ಸಂಜಯ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಕೃಷಿಕಾರ್ಮಿಕರಿಗೆ ಮತ್ತು ಜನಸಮಾನ್ಯರಿಗೆ ಅನಕೂಲವಾಗುವಾ ದೃಷ್ಟಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘ ಹಾಕಿಕೊಂಡಿದ್ದು, ಕಾರ್ಯ ನಿರ್ವಹಿಸುತ್ತಿದೆ. ಸಂಘಕ್ಕೆ ಗೋದಾಮಿನ ಅವಶ್ಯಕತೆ ಇದ್ದು ಶಾಸಕರಿಗೆ ಮನವಿಯನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಸಂಘದ ನಿರ್ದೇಶಕರಾದ ನಾರ್ವೆ ಅಶೋಕ್, ಬಿ.ಪಿ.ಚಿಂತನ, ಕೆ.ವಿ.ಶಿವಮೂರ್ತಿ,ಪಿ.ಮಹಮದ್ ಸಾಧಿಕ್, ಕೆ.ಎನ್.ಗಿರೀಶ್, ಎನ್.ಎಸ್.ಹೇಮಾವತಿ, ಬಿ.ಪಿ.ಗೋಪಾಲ್, ಕಾರ್ಯದರ್ಶಿಬಿ.ಎಸ್. ಸುಮಿತ್ ಕುಮಾರ್, ಗುಮಾಸ್ತ ಬಿ.ಎಸ್.ಶಿವಣ್ಣ ಇದ್ದರು.
ಆದಿವಾಸಿಗಳ ಭೂಮಿ ಹಕ್ಕಿಗಾಗಿ ಆಂದೋಲನ
ಚಿಕ್ಕಮಗಳೂರು: ಭೂಹೀನ ಆದಿವಾಸಿಗಳನ್ನು, ದಲಿತರನ್ನು ಮತ್ತು ಬಡ ರೈತರನ್ನು ತುಂಡು ಭೂಮಿಯಿಂದ ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ಕಾರ್ಯ ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿ ಮಂಗಳವಾರ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ ಮತ್ತು ರಾಜ್ಯ ದಲಿತ, ಆದಿವಾಸಿಗಳ ಭೂಮಿ ಹಕ್ಕಿಗಾಗಿ ಆಂದೋಲನ ಪ್ರತಿಭಟನೆ ಹಮ್ಮಿಕೊಂಡಿದೆ.
ಒಂದು ದಿನದ ಧರಣಿ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲೂ ಈ ಕಾರ್ಯಕ್ರಮ ನಡೆಯಲಿದೆ. ಇಲ್ಲಿನ ಶ್ರೀಬೋಳ ರಾಮೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ದಲಿತ, ಆದಿವಾಸಿಗಳ, ಭೂಮಿಹಕ್ಕಿಗಾಗಿ ಆಂದೋಲನ ರಾಜ್ಯಾಧ್ಯಕ್ಷ ಕೆ.ಎನ್. ವಿಠಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗೌರವ ಸಮರ್ಪಣೆ
ಭದ್ರಾವತಿ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಪದ್ಮಭೂಷಣ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭದ್ರಾವತಿ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಭೇಟಿಮಾಡಿ ಅವರಿಗೆ ಗೌರವ ಸಮರ್ಪಣೆ ಮಾಡಿ ಆಶೀರ್ವಾದವನ್ನು ಪಡೆದರು. ಜಿಲ್ಲಾ ನಿರ್ದೇಶಕ ಸುಧೀರ್ಕುಮಾರ್ಬ್ಂಟ್ವಾಳ್, ವೇದಿಕೆಯ ಉಪಾಧ್ಯಕ್ಷ ಜಿ.ಆನಂದಕುಮಾರ್, ಸದಸ್ಯರಾದ ಆರ್.ಕರುಣಾಮೂರ್ತಿ, ತಾಲ್ಲೂಕು ಯೋಜನಾಧಿಕಾರಿ ಎಂ.ದಿನೇಶ್, ಮಂಜುನಾಥ್ ಹಾಗೂ ರಾಜು ರೇವಣಕರ್ ಈ ಸಂದರ್ಭದಲ್ಲಿ ಹಾಜರಿದ್ದರು.
ಮುರಿದ ಆಸ್ಪತ್ರೆ ಗೇಟ್; ಸಾರ್ವಜನಿಕರಿಗೆ ತೊಂದರೆ
ಮೂಡಿಗೆರೆ: ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಎರಡು ಬದಿಯ ಗೇಟ್ಗಳು ಮುರಿದು ಹೋಗಿರುವ ಪರಿಣಾಮ ರೋಗಿಗಳನ್ನು ನೋಡಲು ಬರುವವರು ಕಾಲು ಮುರಿದು ಕೊಂಡು ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಒದಗಿ ಬಂದಿದೆ. ಈ ಬಗ್ಗೆ ಇದೇ ದಾರಿಯಲ್ಲಿ ಪ್ರತಿ ನಿತ್ಯ ಓಡಾಡುವ ಜನ ಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ನೂರು ಹಾಸಿಗೆಯ ಮಹಾತ್ಮಾಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಡಿ.ಗ್ರೂಪ್ ನೌಕರರ ಕೊರತೆ ಒಂದಡೆಯಾದರೆ, ಆಸ್ಪತ್ರೆಯ ಮುಖ್ಯದ್ವಾರದಲ್ಲಿರುವ ಗೇಟ್ ಮತ್ತೊಂದು ಸಮಸ್ಯೆಯಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ನಿರ್ಮಿಸಿರುವ ಈ ಗೇಟ್ಗಳು ಮಧ್ಯದಲ್ಲಿ ತುಂಡಾಗಿದೆ. ಇದರಿಂದ ರಾತ್ರಿ ಸಮಯದಲ್ಲಿ ಆಸ್ಪತ್ರೆಗೆ ಹೋಗಲು ಸಾಧ್ಯವೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸುವರೇ ಎಂಬುದನ್ನು ಕಾದು ನೋಡಬೇಕಿದೆ.