ಸಕಾರಾತ್ಮಕ ಸ್ಪಂದನೆ ಅಗತ್ಯ
ಬಾಳೆಹೊನ್ನೂರು: ಸಹಕಾರ ಸಂಘಗಳಲ್ಲಿ ಸದಸ್ಯರ ಸಕಾರಾತ್ಮಕ ಸ್ಪಂದನೆ ಇದ್ದಲ್ಲಿ ಮಾತ್ರ ಪ್ರಗತಿ ಸಾಧ್ಯ ಎಂದು ಜಯಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಬಿ. ರಾಜೇಂದ್ರ ಹೇಳಿದ್ದಾರೆ. ಸಮೀಪದ ಜಯಪುರದ ಪಿಎಸಿಎಸ್ ಆವರಣದ ದಿನಸಿ ವಿಭಾಗದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ನೀಡಿರುವ ಯೋಜನೆಯನ್ನು ಕೆಳ ವರ್ಗದ ಜನರು ಸದುಪಯೋಗಪಡೆಸಿಕೊಳ್ಳಬೇಕು ಹಾಗೂ ಸರ್ಕಾರಗಳು ನೀಡುವ ಮೂಲಭೂತ ಸೌಲಭ್ಯವನ್ನು ಎಲ್ಲಾ ವರ್ಗದ ಜನರೂ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು. 2012- 13ನೇ ಸಾಲಿನಲ್ಲಿ ಸಂಘವು ಸದಸ್ಯರಿಗೆ 101.69 ಲಕ್ಷ ಬೆಳೆ ಸಾಲ ನೀಡಿದೆ. ಸ್ವಂತ ಬಂಡವಾಳದಿಂದ ಸದಸ್ಯರಿಗೆ 31.13 ಲಕ್ಷ ಸಾಲ ವಿತರಿಸಲಾಗಿದೆ. ಸಂಘ ಈ ಸಾಲಿನಲ್ಲಿ 4.63 ಲಕ್ಷ ಲಾಭ ಗಳಿಸಿದೆ ಎಂದು ತಿಳಿಸಿದರು.
ಎ.ಸಿ. ವಜ್ರಪ್ಪ, ಕವಿತಾ ಶ್ರೀನಿವಾಸ್, ಅಶೋಕ ಮುಂಡೊಳಲು, ಹುಮಾಯೂನ್ ಕಬೀರ್, ಜಯಂತಿ ನಾಗರಾಜ್, ಅಬುಲ್ ಕಲಾಂ, ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಎಂ. ಸತೀಶ್, ಶಂಕರೇಗೌಡ, ಎಂ.ವಿ. ಸುಬ್ಬರಾಜು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆ
ಇಲ್ಲಿನ ಸಾಂಸ್ಕೃತಿಕ ಸಂಘದ ವತಿಯಿಂದ 67ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 8 ರಂದು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಸ್ಥಳೀಯ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಅಂಗನವಾಡಿ, ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಸ್ಪರ್ಧೆ, 1 ರಿಂದ 4ನೇ ತರಗತಿ ಮಕ್ಕಳಿಗೆ ಮಹಾತ್ಮ ಗಾಂಧೀಜಿ ಚಿತ್ರ ಬಿಡಿಸುವ ಸ್ಪರ್ಧೆ, 5 ರಿಂದ 7ನೇ ತರಗತಿ ಮಕ್ಕಳಿಗೆ ಕನ್ನಡ ದೇಶ ಭಕ್ತಿಗೀತೆ, ನೃತ್ಯ ಸ್ಪರ್ಧೆ, 8 ರಿಂದ 10ನೇ ತರಗತಿ ಮಕ್ಕಳಿಗೆ ಜಾನಪದ ಗೀತೆ ಹಾಡುವ ಸ್ಪರ್ಧೆ, ಪಿಯು, ಐಟಿಐ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಚಿತ್ರಗೀತೆಗಳನ್ನು ಹಾಡುವ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ಜ್ಞಾಪಕ ಶಕ್ತಿ ಪರೀಕ್ಷಾ ಸ್ಪರ್ಧೆ ಆಯೋಜಿಸಲಾಗಿದೆ.
ಭಾಗವಹಿಸುವ ವಿದ್ಯಾರ್ಥಿಗಳು ಆಗಸ್ಟ್ 5 ರೊಳಗೆ ಬಿ.ಕೆ. ಮಹಮ್ಮದ್ ಆಲಿ ಅಧ್ಯಕ್ಷರು, ಸಾಂಸ್ಕೃತಿಕ ಸಂಘ, ಬಾಳೆಹೊನ್ನೂರು ಈ ವಿಳಾಸಕ್ಕೆ ಪ್ರವೇಶ ಪತ್ರವನ್ನು ಕಳುಹಿಸಲು ಕೋರಲಾಗಿದೆ. ಮಾಹಿತಿಗಾಗಿ 9945174698 ಸಂಪರ್ಕಿಸಿ.