ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತೆರವು ವಿರೋಧಿಸಿ ಪ್ರತಿಭಟನೆ

Lingaraj Badiger
Updated On : 24 Jul 2013, 11:26 am

ಚಿಕ್ಕಮಗಳೂರು: ಭೂಹೀನ ಆದಿವಾಸಿಗಳನ್ನು, ದಲಿತರನ್ನು ಮತ್ತು ಬಡ ರೈತರನ್ನು ತುಂಡು ಭೂಮಿಯಿಂದ ಒಕ್ಕಲೆಬ್ಬಿಸುವುದನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿ ಆದಿವಾಸಿಗಳು ಹಾಗೂ ದಲಿತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಶ್ರೀ ಬೋಳ ರಾಮೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಲ್ಲದ ಕಿರುಕುಳ: ನೂರಾರು ವರ್ಷಗಳಿಂದ ಈ ತುಂಡು ಭೂಮಿಗಳನ್ನು ಸಾಗುವಳಿ ಮಾಡುತ್ತಾ ಬಂದಿರುವ ಆದಿವಾಸಿ, ದಲಿತ ಹಾಗೂ ಬಡ ರೈತರನ್ನು ತುಂಡು ಭೂಮಿಯ ಸಾಗುವಳಿಯಿಂದ ಒಕ್ಕಲೆಬ್ಬಿಸಿಲ್ಲ. ಈಗ ಸಲ್ಲದ ಕಿರುಕುಳ ಹಾಗೂ ಹಿಂಸೆ ನೀಡುತ್ತಾ, ಸುಳ್ಳು ತಕರಾರುಗಳನ್ನು ದಾಖಲಿಸುತ್ತಾ ಭೂಹೀನ ಬಡವರ ಜೀವನಾಧಾರವಾದ ತುಂಡು ಭೂಮಿಗಳಿಂದ ಒಕ್ಕಲೆಬ್ಬಿಸಿ ವಂಚಿಸುತ್ತಿರುವಂತಹ ಕೃತ್ಯದಲ್ಲಿ ಅರಣ್ಯ ಇಲಾಖೆಯು ನಿರಂತರವಾಗಿ ಮುಂದುವರೆಯುತ್ತಲೇ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
 ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ- 2006 ಮತ್ತು ನಿಯಮ- 2008 ರ ಪ್ರಕಾರ ವೈಯುಕ್ತಿಕ ಮತ್ತು ಸಮುದಾಯದ ಹಕ್ಕು ಏಕ ಕಾಲದಲ್ಲಿ ಜಿಲ್ಲೆಯಾಧ್ಯಂತ ಅನುಷ್ಠಾನ ವಾಗಬೇಕು ಎಂದು ಆಗ್ರಹಿಸಿದ್ದಾರೆ.
ಅರ್ಜಿ ಇತ್ಯರ್ಥ ಮಾಡಿ: ಹಲವಾರು ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಾ ರಾಜ್ಯದಲ್ಲಿ ಸುಮಾರು 20 ಲಕ್ಷ ಏಕರೆಗೆ ಸಂಬಂಧಿಸಿದ  ಫಾರ್ಮ ನಂ. 50 ರಲ್ಲಿ 10 ಲಕ್ಷ, ಫಾರ್ಮ ನಂ. 53 ರಲ್ಲಿ 10 ಲಕ್ಷದಷ್ಟು ಅರ್ಜಿಗಳು ರಾಜ್ಯ ಕಂದಾಯ ಇಲಾಖೆಯ, ಭೂ ಮಂಜೂರಾತಿ ಇಲಾಖೆಗೆ ಬಂದಿದ್ದು, ಈ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಮಾಡಿ ಅರ್ಜಿದಾರರಿಗೆ ಭೂಮಿಯನ್ನು ಕೊಡಿಸಬೇಕು.
 ಡಾ. ವಿ. ಸುಬ್ರಮಣ್ಯಂ ಸಮಿತಿ ಶಿಫಾರಸ್ಸಿನಂತೆ ರಾಜ್ಯದಲ್ಲಿ ಅಕ್ರಮವಾಗಿ ಒತ್ತುವರಿಯಾದ ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು. ದಲಿತರಿಗೆ ದಕ್ಕದ ತುಂಡು ಭೂಮಿಗಳನ್ನು ರಕ್ಷಣೆ ಮಾಡಲು ಜಾರಿಗೆ ತಂದ ಪಿಟಿಸಿಎಲ್ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದು ತೋಟಿ ತಳವಾರಿ ಭೂಮಿಗಳನ್ನು ಮರು ಮಂಜೂರು ಮಾಡಿ ಮಾರಾಟ ಮಾಡದಂತೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
ಪ್ರತಿಭಟನೆಯಲ್ಲಿ ದಲಿತ, ಆದಿವಾಸಿಗಳ, ಭೂಮಿ ಹಕ್ಕಿಗಾಗಿ ಆಂದೋಲನದ ರಾಜ್ಯಾಧ್ಯಕ್ಷ ಕೆ.ಎನ್. ವಿಠಲ್, ಮುಖಂಡರಾದ ಸುರೇಶ್, ಕೃಷ್ಣಪ್ಪ, ಮಂಜುನಾಥ್, ನಾರಾಯಣ, ಎಚ್.ಎನ್. ಜ್ಯೋತಿ  ಹಾಗೂ ಆದಿವಾಸಿಗಳು, ದಲಿತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement