'ಮಳೆಯಾಗದ ಗ್ರಾಮಗಳಿಗೆ ಟ್ಯಾಂಕರ್ ನೀರು ಒದಗಿಸಿ'
ಕ.ಪ್ರ.ವಾರ್ತೆ, ಕಡೂರು, ಜು.23
2 ಕೋಟಿ ರು.ಗಳ ಕ್ರಿಯಾಶೀಲ ಯೋಜನೆ ಸಿದ್ಧ, ನಿಗಧಿತ ಗುರಿ ಸಾಧಿಸದ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಅನುದಾನ ವಾಪಸ್, ತಾಲೂಕಿನ ಕೆಲವೆಡೆ ಸರಿಯಾಗಿ ಮಳೆಯಾಗದೆ ಎಂಟು ಗ್ರಾಮಗಳಿಗೆ ಟ್ಯಾಂಕರ್ನಿಂದ ನೀರು ಪೂರೈಕೆ, ಮೇವಿನ ಕೊರತೆಯಿಂದ ಗೋಶಾಲೆ ಮುಚ್ಚಲಾಗಿದೆ, ಭ್ರಷ್ಟಾಚಾರ ನಡೆದಿರುವ 32 ಗ್ರಾಪಂಗಳ ತನಿಖೆ ಆಗಬೇಕು, ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿ ವಿತರಿಸಿದಿದ್ದರೂ ಬಿಲ್ಲು ನೀಡಿಕೆ...
ಇದು ಕಡೂರು ತಾಪಂ ಸಭಾಂಗಣದಲ್ಲಿ ಜಿಲ್ಲಾ ಪತ್ರಕರ್ತರ ಸಂಘ, ತಾಲೂಕು ಸಂಘದ ಅಡಿಯಲ್ಲಿ ಏರ್ಪಡಿಸಿದ್ದ ತಾಪಂ ಜನಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಕೇಳಿ ಬಂದ ಆರೋಪಗಳು.
ಸಂವಾದದ ಆರಂಭದಲ್ಲಿ ತಾಪಂ ವ್ಯಾಪ್ತಿಯ ವಿವಿಧ ಅನುದಾನ, ಕಾಮಗಾರಿಗಳ ವಿವರ ನೀಡಿದ ಕಾರ್ಯ ನಿರ್ವಾಹಕ ಟಿ.ಎನ್. ಮೂರ್ತಿ 13ನೇ ಹಣಕಾಸು ನಿಧಿಯಿಂದ 2013ರಲ್ಲಿ 1ಕೋಟಿ ರು. ಅನುದಾನ ಸೇರಿದಂತೆ ವಿವಿಧ ಅನುದಾನದಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಈ ಸಾಲಲ್ಲಿ 1.42 ಕೋಟಿ ರು. ಕರವಸೂಲಿ ಗುರಿ ಇದ್ದು, 14,75,604 ವಸೂಲಾಯಿತು. 24 ಕಾಮಗಾರಿ ಪೂರ್ಣಗೊಳಿಸಬೇಕಿದ್ದು, ಈಗಾಗಲೇ 2 ಕೋಟಿ ರು. ಕ್ರಿಯಾಶೀಲ ಯೋಜನೆ ಕಳುಹಿಸಲಾಗಿದ್ದು ಇದರಲ್ಲಿ ಅಂಗನವಾಡಿ ಕೇಂದ್ರ, ಕಾಂಪೌಂಡ್, ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು. ಬರಪರಿಹಾರದಲ್ಲಿ 159 ಜಾನುವಾರುಗಳ ತೊಟ್ಟಿ ನಿರ್ಮಿಸಲಾಗುವುದು ಎಂದರು.
ಗ್ರಾಪಂ ವ್ಯಾಪ್ತಿಯಲ್ಲಿ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಬೇರೆ ತಾಲೂಕಿಗೆ ವಿತರಿಸಲಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅಧಿಕಾರಿಗಳು, ಆ ರೀತಿ ಅಗಿಲ್ಲ. ಈವರೆಗೆ 36 ಸಾವಿರ ಸಸಿ ವಿತರಿಸಲಾಗಿದೆ. ಮಳೆಯಿಲ್ಲದೆ ಕೆಲವೆಡೆ ಸಸಿ ವಿತರಿಸಿಲ್ಲ. ಸಸಿಗಳು ಪೂರ್ಣ ಒಣಗಿರುವುದು ಗ್ರಾಪಂ ಜವಾಬ್ದಾರಿಯಾಗಿದ್ದು ತಾಪಂ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆ ಕುರಿತು ನೀಡಿದ ಮಾಹಿತಿಯಂತೆ ಕಳೆದ 2011ರಿಂದ 13ನೇ ಸಾಲಿನಲ್ಲಿ 59 ಗ್ರಾಪಂ ವ್ಯಾಪ್ತಿಯಲ್ಲಿ 23.19 ಕೋಟಿ ರು. ಬಿಡುಗಡೆಯಾಗಿದ್ದು ಕಾರ್ಮಿಕರು ಕೆಲಸಕ್ಕೆ ಬಾರದೆ ನಿರೀಕ್ಷಿತ ಗುರಿ ಮುಟ್ಟದ ಕಾರಣ 2.95 ಕೋಟಿ ರು. ಖರ್ಚಾಗಿ ಉಳಿದ ಅನುದಾನ ವಾಪಸ್ ಹೋಗಿದೆ. 2013ನೇ ಸಾಲಿನಲ್ಲಿ ಈವರೆಗೆ 7.8 ಕೋಟಿ ರು. ಬಂದಿದ್ದು ಅದರಲ್ಲಿ 55 ಲಕ್ಷ ರು. ಖರ್ಚಾಗಿದೆ ಎಂದರು.
ತಾಲೂಕಿನ ಗೋ ಶಾಲೆಗಳನ್ನು ಮುಚ್ಚಿರುವ ಬಗ್ಗೆ ವಿವರ ನೀಡಿದ ಅಧಿಕಾರಿಗಳು ಮೇವಿನ ಕೊರತೆಯಿಂದಾಗಿ ಗೋಶಾಲೆಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದರು.
ಸಂವಾದದಲ್ಲಿ ತಾಪಂ ಅಧ್ಯಕ್ಷ ಓಂಕಾರಪ್ಪ, ಸದಸ್ಯರಾದ ಆರ್. ಶಿವಕುಮಾರ್, ಪ್ರಭುಕುಮಾರ್, ಬಸವರಾಜಪ್ಪ, ಶಶಿಧರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್, ತಾಲೂಕು ಅಧ್ಯಕ್ಷ ಎಚ್. ಜಗದೀಶ್ ಪರಮೇಶ್ ಇದ್ದರು.