ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಿಲ್ಲೆಯಲ್ಲಿ 164 ಡೆಂಘೀ ಪ್ರಕರಣ ಪತ್ತೆ

Lingaraj Badiger
Updated On : 25 Jul 2013, 11:14 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.24
ಸತತ 10 ದಿನಗಳ ಕಾಲ ಜಿಲ್ಲೆಯಲ್ಲಿ ಸುರಿದ ಮುಂಗಾರು ಮಳೆ ಬುಧವಾರದಂದು ಬಿಡುವು ನೀಡಿತು. ಈ ಮಳೆಯಿಂದಾಗಿ ಸಾರ್ವಜನಿಕ ಆಸ್ತಿ, ಪ್ರಾಣ ಹಾನಿ ಸಂಭವಿಸಿದ್ದು, ಜತೆಗೆ ಸಾಂಕ್ರಾಮಿಕ ರೋಗಗಳೂ ಜಿಲ್ಲೆಯ ಜನರ ಬೆನ್ನು ಹತ್ತಿವೆ.  
ಈ ವರ್ಷದಲ್ಲಿ ಡೆಂಘೀಯಿಂದ ಮೃತಪಟ್ಟವರ ಸಂಖ್ಯೆ 6 ಎಂದು ಹೇಳಲಾಗಿದ್ದರೂ, ಇದರಲ್ಲಿ ದೃಢಪಟ್ಟಿದ್ದು 3 ಪ್ರಕರಣ ಮಾತ್ರ. ತರೀಕೆರೆ ತಾಲೂಕು ಒಂದರಲ್ಲೇ 3 ಮಂದಿ ಡೆಂಘೀಯಿಂದ ಮೃತಪಟ್ಟಿದ್ದಾರೆ. ಇದೀಗ ಮಳೆ ಬಿಡುವು ನೀಡಿದ್ದರಿಂದ ಡೆಂಘೀ ಜತೆಗೆ ಮುಂದಿನ ದಿನಗಳಲ್ಲಿ ಮಲೇರಿಯಾವೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
40ಕ್ಕೆ ಏರಿಕೆ: ಕಳೆದ ವರ್ಷ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಡೆಂಘೀ ಪ್ರಕರಣಗಳ ಸಂಖ್ಯೆ 40. ಆದರೆ ಈ ವರ್ಷದಲ್ಲಿ ಈವರೆಗೆ ಪತ್ತೆಯಾಗಿರುವ ಡೆಂಘೀ ಪ್ರಕರಣಗಳ ಸಂಖ್ಯೆ ಬರೋಬರೀ 164. ಆರೋಗ್ಯ ಇಲಾಖೆಯಿಂದ ಜನ ಜಾಗೃತಿ ಕಾರ್ಯಕ್ರಮ ಕೈಗೊಂಡರೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆ.
ಜಿಲ್ಲೆಯಲ್ಲಿ 511 ಶಂಕಿತ ಡೆಂಘೀ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 164 ಪ್ರಕರಣಗಳು ದೃಢಪಟ್ಟಿವೆ.
ಇದರಲ್ಲಿ ಕಡೂರು ತಾಲೂಕಿನ 221 ಶಂಕಿತ ಪ್ರಕರಣಗಳಲ್ಲಿ 84, ತರೀಕೆರೆ ತಾಲೂಕಿನ 132 ಶಂಕಿತ ಪ್ರಕರಣಗಳಲ್ಲಿ 40 ದೃಢಪಟ್ಟಿವೆ.
ಮೂಡಿಗೆರೆಯಲ್ಲಿ 10: ಮೂಡಿಗೆರೆ ತಾಲೂಕಿನ 10 ಪ್ರಕರಣಗಳಲ್ಲಿ 1, ಕೊಪ್ಪದ 34 ರಲ್ಲಿ 5, ಎನ್.ಆರ್.ಪುರ ತಾಲೂಕಿನ 8 ರಲ್ಲಿ  3, ಚಿಕ್ಕಮಗಳೂರು ತಾಲೂಕಿನ 98ರಲ್ಲಿ 31 ಪ್ರಕರಣ ದೃಢಪಟ್ಟಿವೆ. ಶೃಂಗೇರಿ ತಾಲೂಕಿನ 8 ಶಂಕಿತ ಪ್ರಕರಣಗಳಲ್ಲಿ 5 ಪ್ರಕರಣಗಳಲ್ಲಿ ರಕ್ತ ಪರಿಶೀಲನೆ ಮಾಡಲಾಗಿದ್ದು, ಇದರಲ್ಲೂ ಯಾವುದೇ  ಪ್ರಕರಣ ದೃಢಪಟ್ಟಿಲ್ಲ.
ಮಳೆ ಬಂದರೆ ಶೀತ, ಜ್ವರ ಬರುವುದು ಸಹಜ. ಜ್ವರ ಮುಂದುವರೆದರೆ ಅದು ಡೆಂಘೀಗೆ ತಿರುಗುತ್ತದೆ ಎಂಬ ಭಯ ಬಹಳಷ್ಟು ಜನರಿಗೆ ಕಾಡಿತ್ತು.
ಕಳೆದ ಜೂನ್‌ನಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ಜ್ವರದಿಂದಾಗಿ ಒಳ ರೋಗಿಗಳಾಗಿ ದಾಖಲಾದ ಮಕ್ಕಳ ಸಂಖ್ಯೆ 175. ಜುಲೈ 20ರವರೆಗೆ  ದಾಖಲಾದ ಮಕ್ಕಳ ಸಂಖ್ಯೆ 217. ಅಂದರೆ ಮಳೆಯಿಂದಾಗಿ ಜ್ವರ ಬಂದಿರುವ ಮಕ್ಕಳ ಸಂಖ್ಯೆಯೂ ಅಧಿಕವಾಗಿದೆ.
ಮುಂಜಾಗ್ರತೆ: ಡೆಂಘೀ, ಮಲೇರಿಯಾ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳು ಮಳೆಗಾಲದಲ್ಲಿ ಬರುತ್ತವೆ.
ಮಳೆ ನೀರು ಒಂದೆಡೆ 3 ದಿನಕ್ಕೂ ಅಧಿಕ ಸಂಗ್ರಹವಾದರೆ, ಅಲ್ಲಿ ಸೊಳ್ಳೆ ಮೊಟ್ಟೆ ಇಟ್ಟು, ಅವು ಕೆಲವೇ ದಿನಗಳಲ್ಲಿ ಸಂತತಿ ಉತ್ಪತ್ತಿ ಮಾಡುತ್ತವೆ.
ಈ ಸೊಳ್ಳೆ ರಾತ್ರಿ ವೇಳೆ ಕಚ್ಚದೆ, ಹಗಲಿನಲ್ಲಿ ಕಚ್ಚುವಿದರಿಂದ ಮೊದಲು ಜ್ವರ ಬರುತ್ತದೆ. ಅದು, ತಕ್ಷಣಕ್ಕೆ ವಾಸಿವಾಗುವುದಿಲ್ಲ. ಅದಕ್ಕಾಗಿ ಸಕಾಲಕ್ಕೆ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು.
ಇಲ್ಲದೆ ಹೋದರೆ ಡೆಂಘೀ ಜ್ವರ ಜೀವದ ಮೇಲೆ ದುಷ್ಪರಿಣಾಮ ಬೀರಲಿದೆ. ಅದುದರಿಂದ ಮನೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.
ನಿರಂತರ ಮಳೆ ಬರುವುದರಿಂದ ಸೊಳ್ಳೆ ಉತ್ಪತ್ತಿಗೆ ಅಡಚಣೆಯಾಗುತ್ತದೆ. ಮಳೆ ಬಿಡುವು ಕೊಟ್ಟರೆ ಸಂತತಿ ಉತ್ಪತ್ತಿಗೆ ಅನುಕೂಲವಾಗಲಿದೆ.
ಸದ್ಯ ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕು. ಇಲ್ಲದೆ ಹೋದರೆ  ಡೆಂಘೀ, ಮಲೇರಿಯಾ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement