ನಿಸ್ವಾರ್ಥ ಸೇವೆಯಲ್ಲಿ ಸಾರ್ಥಕ ಭಾವನೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.24
ನಿಸ್ವಾರ್ಥವಾದ ಸೇವೆಯಲ್ಲಿ ಸಾರ್ಥಕತೆ ಇದೆ ಎಂದು ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ಹಾಸನದ ಎಂ.ಕೆ. ಗೋವರ್ಧನ ಕುಮಾರ ಹೇಳಿದರು.
ನಗರದ ಎಂ.ಎಲ್.ವಿ. ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ನಿಸಾನ್ ಹುಸೇನ್ ತಂಡಕ್ಕೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ರೋಟರಿ ಸದಸ್ಯರು ಸೇವಾ ಕಾರ್ಯದಿಂದ ಸಂತೋಷಪಡುತ್ತಾರೆ. ನಾವು ಮಾಡುವ ಒಳ್ಳೆಯ ಕೆಲಸದಿಂದ ಸಮಾಜಕ್ಕೆ ಉಪಯುಕ್ತವಾದರೆ ಅದೇ ಒಳ್ಳೆಯ ಸೇವೆ ಎನಿಸಿಕೊಳ್ಳುತ್ತದೆ ಎಂದರು.
12 ಲಕ್ಷಕ್ಕೂ ಹೆಚ್ಚು ಸದಸ್ಯರು: ಶತಮಾನದ ಹಿಂದೆ ಕೇವಲ ನಾಲ್ವರು ವೃತ್ತಿ ಪರಿಣಿತರಿಂದ ಸ್ನೇಹ, ಸೌಹಾರ್ದತೆಗಾಗಿ ಪ್ರಾರಂಭಗೊಂಡ ರೋಟರಿ ಸಂಸ್ಥೆ ವಿಶ್ವಾದ್ಯಂತ ವ್ಯಾಪಿಸಿ 12 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಅರ್ಹರಿಗೆ ನೆರವು ನೀಡುವ ಹಿನ್ನೆಲೆಯಲ್ಲಿ ಪ್ರಾರಂಭಿಸಲ್ಪಟ್ಟ ರೋಟರಿ ಫೌಂಡೇಷನ್ ವಿಶ್ವದ ಅತಿದೊಡ್ಡ ಸೇವಾ ನಿಧಿಯಾಗಿದೆ ಎಂದರು.
ಎಸ್ಸೆಸೆಲ್ಸಿ ಹಾಗೂ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಸ್ಮರಣಿಕೆ ವಿತರಿಸಿದ ಗೋವರ್ಧನ್ ಕುಮಾರ್ ಮಾತನಾಡಿ, ಜೀವನದಲ್ಲಿ ಶಿಕ್ಷಣ ಅತ್ಯಂತ ಮಹತ್ವವಾದದ್ದು. ಉನ್ನತ ಗುರಿಯನ್ನು ಇಟ್ಟುಕೊಂಡು ಅದನ್ನು ಕಾರ್ಯಗತಗೊಳಿಸಲು ನಿರಂತರ ಅಧ್ಯಯನ ಹಾಗೂ ಪರಿಶ್ರಮ ಅಗತ್ಯ ಎಂದರು.
ಮೂಲ ಸೌಕರ್ಯ ಒದಗಿಸಿ: ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದ ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಎನ್.ಎಂ. ಹರ್ಷ ಮಾತನಾಡಿ, ಹಸಿವು, ಸಂಕಷ್ಟಕ್ಕೆ ಸ್ಪಂದಿಸುವ ಗುಣಧರ್ಮ ಬೆಳೆಸಿಕೊಳ್ಳಬೇಕು. ಶಾಂತಿ ಇರುವಲ್ಲಿ ಅಭಿವೃದ್ಧಿ ಇರುತ್ತದೆ. ಸಮಾಜದ ಮೂಲ ಸಂಗತಿಗಳತ್ತ ಗಮನಹರಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಎಲ್ಲರಿಗೂ ಶಿಕ್ಷಣ ನೀಡುವಲ್ಲಿ ಆಸಕ್ತಿ ವಹಿಸಬೇಕು ಎಂದವರು ಹೇಳಿದರು.
ನಿರ್ಗಮಿತ ಅಧ್ಯಕ್ಷ ಆರ್. ಮಂಜುನಾಥ್, ಒಂದು ವರ್ಷದ ಕಾರ್ಯಚಟುವಟಿಕೆಗೆ ನೆರವು ನೀಡಿದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷ ನಾಸಿನ್ ಹುಸೇನ್ ಮಾತನಾಡಿ, ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂಬ ಉತ್ಕಟ ಇಚ್ಚೆ ಬಾಲ್ಯದಿಂದಲೂ ಇದ್ದು, ರೋಟರಿ ಕಾಫಿಲ್ಯಾಂಡ್ ಅದಕ್ಕೆ ಮಾರ್ಗದರ್ಶಿಯಾಗಿದೆ. ಜನರಿಗೆ ಉಪಯುಕ್ತವಾಗುವ ಹಲವು ಕಾರ್ಯಕ್ರಮಗಳ ಜೊತೆಗೆ ಜಿಲ್ಲಾ ರಾಜ್ಯಪಾಲರ ಕಾರ್ಯಸೂಚಿಯನ್ನೂ ಪ್ರಾಮಾಣಿಕವಾಗಿ ಅನುಷ್ಟಾನನೊಗಳಿಸಲು ಎಲ್ಲರ ಸಹಕಾರ ಕೋರಿದರು.
ಮಂಜುನಾಥ್ ಸ್ವಾಗತಿಸಿದರು. ಎಂ.ಎನ್. ಪ್ರವೀಣ್ ವರದಿ ಮಂಡಿಸಿದರು, ನೂತನ ಕಾರ್ಯದರ್ಶಿ ಆರ್. ನಾಗೇಂದ್ರ ವಂದಿಸಿದರು. ಹಳೆಕೋಟೆ ತೇಜಸ್ವಿ, ಕಿಶನ್ ಗೌಡ ಮತ್ತು ಉಜ್ವಲ್ ಪಡುಬಿದ್ರಿ ಅತಿಥಿಗಳನ್ನು ಪರಿಚಯಿಸಿದರು.